Friday, November 27, 2009

ಹೋರಾಟದ ಹಾದಿ




ಅಮ್ಮ ನೋಡಲ್ಲಿ ಅಪ್ಪ ಕೂತಲ್ಲೇ ತೂಕಡಿಸುತ್ತಿದ್ದಾರೆ,ಶ್ ಮೆಲ್ಲ ಮೆಲ್ಲ ಎಂದು ಅರ್ಜುನ್ ಅಮ್ಮನ ಕೈ ಹಿಡಿದು ರಾಯರ ಪಕ್ಕ ಬಂದ. ಎ ಸುಮ್ಮನಿರು ಕಾಲೇಜಲಿ ಏನು ಕೆಲಸ ಇತ್ತೋ ಏನೋ, ನಿನಗೆ ಎಲ್ಲ ಮಕ್ಕಳಾಟಿಕೆ ಎಂದು ಶ್ರೀಮತಿ ಗದರಿಸಿ ಮೆಲ್ಲ ರಾಯರನ್ನು ಎಬ್ಬಿಸಿದರು.ಏನ್ರೀ ಇಲ್ಲಿ ಚೇರಲ್ಲಿ ಯಾಕೆ ತೂಕಡಿಸುವುದು ಒಳಗೆ ಮಂಚದಲ್ಲಿ ಮಲಗಬಾರದ ಎಂದರು.ಏನೋ ಯೋಚಿಸುತ್ತಿದ್ದ ರಾಯರಿಗೆ ಪಕ್ಕನೆ ಎಚ್ಚರವಾಯಿತು.ಒಂದು ಕ್ಷಣ ಏನಾಗುತ್ತಿದೆ,ಇದು ಕನಸೋ ನನಸೋ ಎಂದು ಗೊತ್ತಾಗಲಿಲ್ಲ,ರಾಯರು ತಮ್ಮ ಕಾಲೇಜಿನ ಜೀವನವನ್ನು ನೆನಪಿಸಿಕೊಂಡು ಕುಳಿತಿದ್ದರು,ಆಮೇಲೆ ನಿಧಾನಕ್ಕೆ ಸಾವರಿಸಿ ಗಂಟೆ ಎಷ್ಟಾಯಿತು ಎಂದರು.ಎಲ್ಲ ಮಾಸ್ತರುಗಳು ಹೀಗೆಯೇ ಕೂತಲ್ಲೇ ನಿದ್ದೆ ಮಾಡುವುದು,ನಾವು ಮಾತ್ರ ಅವರು ಮಾಡುವ, ಅಲ್ಲಲ್ಲ "ಕೊರೆ"ಯುವ ಪಾಠವನ್ನು ಕೇಳಬೇಕು,ಇದ್ಯಾವ ನ್ಯಾಯನಪ್ಪ ಎಂದು ಅರ್ಜುನ್ ಜೋರಾಗಿ ಹೇಳುತ್ತಿದ್ದ.ಗಂಟೆ ೪ ಮುಕ್ಕಾಲು ಆಯಿತು,ದನ ಒಂದೇ ಸಮನೆ ಕೂಗುತ್ತಿದೆ,ಎಂದು ಶ್ರೀಮತಿ ಎದ್ದು ಹೊರಟಳು.

ಹೌದು ಎಲ್ಲಿ ಫ್ರೆಂಡ್ಸ್ ?ಎನಿವತ್ತು ಆಟ ಇಷ್ಟು ಬೇಗ ನಿಲ್ತು ಎಂದು ರಾಯರು ಕೇಳಿದರು.ನೋಡಿ ಎಲ್ಲ ಗೊತಿದ್ದು ಗೊತ್ತಿಲ್ಲದವರ ಹಾಗೆ ನಾಟಕ ಮಾಡುವುದು ಎಂದ ಅರ್ಜುನ್.ನಾನು ನಿದ್ದೆ ಮಾಡುತ್ತಿದ್ದೆ ಎಂದು ನೀನೆ ಮೊದಲು ನೋಡಿದವನು ಇನ್ನು ನೀನು ಏನು ಮಾಡುತ್ತಿದ್ದೆ ಎಂದು ನನಗೆ ಹೇಗೆ ಗೊತ್ತಾಗಬೇಕು? ಎಂದರು.ಮತ್ತೆ ಚೆಂಡು ಬಿಸಾಡಿ ಹೋಯಿತು ಎಂದಾಗ ಅರ್ಜುನ್ ಕಣ್ಣಲ್ಲಿ ನೀರು ತುಂಬಿತ್ತು.ಛೀ ಇದಕ್ಕೆ ಯಾರದ್ರು ಅಳ್ತಾರೇನೋ ಬಾ ಹುಡುಕುವ ನಾನೂ ಬರ್ತೀನಿ ನೋಡೋಣ ಎಂದರು.ಒಳ್ಳೆ ಅಪ್ಪ, ನೋಡು ಅಮ್ಮನ ಹತ್ರ ಹೇಳಿದ್ದಕ್ಕೆ, ಒಳ್ಳೇದಾಯಿತು ಇನ್ನಾದ್ರು ಆಡೋದು ಸ್ವಲ್ಪ ಕಡಿಮೆ ಆಗಬಹುದು ಎಂದರು. ಏನು ಆಡೋದು ಅಷ್ಟು ದೊಡ್ಡ ತಪ್ಪ? ಹೀಗೆ ಅರ್ಜುನ್ ಒಂದರ ಹಿಂದೆ ಒಂದರಂತೆ ಮುದ್ದು ಮುದ್ದಾಗಿ ಪ್ರಶ್ನೆ ಕೇಳುತ್ತಲೇ ಇದ್ದ. ಆಡೋದು ತಪ್ಪಲ್ಲ ಆದರೆ ನೀನು ಮಧ್ಯಾನ್ನ ೩ ಗಂಟೆಗೆ ಅಡ್ತ ಇದ್ದೀಯಲ್ಲ ಅದು ತಪ್ಪು ಅಷ್ಟೆ ,ನೋಡು ಇಷ್ಟು ಹೊತ್ತಿಗೆ ಆಡಲು ಶುರು ಮಾಡಿದ್ದರೆ ಅಮ್ಮನು ಏನು ಹೇಳುತ್ತಿರಲಿಲ್ಲ ಎಂದರು.ಇಷ್ಟೆಲ್ಲಾ ಗಡಿಬಿಡಿ ಆಗುವಾಗ "ಪ್ರೀತಿ"ಯು ಒಳಗಿಂದ ಬಂದಳು.ಮೂವರು ಸೇರಿ ಚೆಂಡು ಹುಡುಕ ತೊಡಗಿದರು.ಪ್ರೀತಿ ಬಲು ಚೂಟಿ, ಅಲ್ಲೇ ಕಾರ್ ಶೆಡ್ಡು ಪಕ್ಕದಲ್ಲೇ ಇರುವ ಪೊದೆಯೊಳಗೆ ಚೆಂಡನ್ನು ಕಂಡಳು.ಕೂಡಲೇ ಅರ್ಜುನ್ ಬ್ಯಾಟಿಂದ ಪೊದೆಗೆ ಹೊಡೆದು ದಾರಿ ಮಾಡಿ ಚೆಂಡನ್ನು ತಂದನು.

ರಾಯರು ಹಾಗೆಯೆ ತೋಟದ ಕಡೆಗೆ ಹೊರಟರು."ಸೀನ" ತೋಟದಲ್ಲಿ ಕುಳಿತು ವೀಳ್ಯದೆಲೆ ತಿನ್ನುತ್ತಿದ್ದ.ರಾಯರನ್ನು ಕಂಡ ಕೂಡಲೇ ಗಡಿಬಿಡಿಯಿಂದ ಎದ್ದ,"ಮಿತ್ತ ತಟ್ಟುಗು ಪೂರ ಸೊಪ್ಪು ಆಂಡು ಅನ್ನೆರೆ"(ಮೇಲಿನ ತಟ್ಟಿಗೆ ಸೊಪ್ಪು ಆಯಿತು)ಎಂದ.
ರಾಯರು ಹಾಗೆ ನೋಡಿದರು,ಏನು ಸೊಪ್ಪು ಎಲ್ಲ ಬಹಳ ಕಡಿಮೆ ಹಾಕಿದ್ದಿ ಎನ್ನಲು ಸೀನ "ಅವು ತೂಲೆ ಅನ್ನೆರೆ ದುಂಬು ಮಾಂತ ಆಂಡ ಮಲ್ಲ ಕಟ್ಟ ಬರೊಂದು ಇತ್ತುಂಡು ಇತ್ತೆತ ಕಟ್ಟಲ ಅಂಚನೆ ಐಟು ಏನು ಎತುಂದು ಪಾದೊಲಿ" ಎಂದ(ಅದು ನೋಡಿ ಧಣಿಗಳೇ ಮೊದಲು ಆದ್ರೆ ಸೊಪ್ಪಿನ ಕಟ್ಟ ಬಹಳ ದೊಡ್ಡದಾಗಿ ಇರುತ್ತಿತು ಆದರೆ ಈಗಿನ ಕಟ್ಟವು ಅಷ್ಟೆ ,ಅದರಲ್ಲಿ ನಾನು ಎಷ್ಟೂಂತ ಹಾಕಲಿ)(ಸಾಮಾನ್ಯವಾಗಿ ದಕ್ಷಿಣ ಕನ್ನಡದ ಕಡೆ ಜನ ತುಳುವಲ್ಲೇ ಸಂಭಾಷಣೆ ನಡೆಸುತ್ತಾರೆ. ಇನ್ನು ಅಡಿಕೆ,ತೆಂಗು ಮುಂತಾದ ಬೆಳೆಗಳಿಗೆ ಸಾಮಾನ್ಯವಾಗಿ ಮಳೆಗಾಲದಲ್ಲಿ ಸೊಪ್ಪು ,ಗೊಬ್ಬರ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ,ಮತ್ತೆ ತೋಟವನ್ನು ಮೇಲಿನ ತಟ್ಟು ,ಕೆಳಗಿನ ತಟ್ಟು ,ನಡು ತಟ್ಟು ಹೀಗೆಲ್ಲ ವಿಭಾಗಿಸಿರುತ್ತಾರೆ).ಇವನ ಹತ್ತಿರ ವಾದ ಮಾಡಿ ಪ್ರಯೋಜನವಿಲ್ಲ ಎಂಬುದು ರಾಯರಿಗೆ ಮೊದಲೇ ಗೊತ್ತಿತ್ತು,ಆದರು ಕಂಡಾಗ ಒಮ್ಮೆ ವಿಚಾರಿಸಿ ನೋಡುವುದು,ಆಗ ಅವನು ಹೊಸ ಹೊಸ ಐಡಿಯ ಕೊಡುತ್ತಾನೆ,ತನ್ನನ್ನು ತಾನು ಸಮರ್ಥಿಸುತ್ತಾನೆ,ಎಂದೂ ಬಿಟ್ಟು ಕೊಡುವುದಿಲ್ಲ.ಆಗಲೇ ಸೀನ ತನ್ನ ಹೊಸ ವರಸೆ ಶುರು ಮಾಡಿದ್ದ "ಆಂಡ ಈರು ದಾದೆ ಪನ್ಲೆ, ಬೇಲೆ ಪಂಡ ಈರೆನವೇ ಅಪ್ಪ,ಈರೆನ ದುಂಬು ಮಲ್ಲ ಅನ್ನೆರು ದಾಲ ಯಾರಂದು"(ನೀವೇನೆ ಹೇಳಿ ಕೆಲಸ ಅಂದ್ರೆ ನಿಮ್ಮದೇ ಅಪ್ಪ,ನಿಮ್ಮ ಮುಂದೆ ದೊಡ್ಡ ರಾಯರು ಏನೇನು ಇಲ್ಲ ಎಂಬರ್ತದ ಮಾತುಗಳನ್ನಾಡಿದ).ರಾಯರಿಗೆ ಅಂದಾಜು ಆಗತೊಡಗಿತು,ಇವತ್ತೇನೋ ಇವನ ಕೆಲಸ ಆಗಬೇಕಿದೆ ಅದಕ್ಕೆ ಹೀಗೆ ನೈಸ್ ಮಾಡುತ್ತಿದ್ದಾನೆ.ಏನಿವತ್ತು ಸೀನ ಬಹಳ ಕುಶಿಯಾಗಿರುವ ಹಾಗೆ ಇದೆ ಎಂದ."ದಾಲ ಇಜ್ಜಿ ಅನ್ನೆರೆ ಪಂಡ ಇನಿ ಒಂಜಿ ೫೦೦ ರೂಪಾಯಿ ಕೂಟುತು ಕೊರೋಡು ಮರ್ಮಾಯೇ ಎಲ್ಲೆ ಬರ್ಪೆಗೆ" ಎಂದ(ಏನಿಲ್ಲ ಇವತ್ತು ಒಂದು ೫೦೦ ರೂಪಾಯಿ ಜಾಸ್ತಿ ಸೇರಿಸಿ ಕೊಡಬೇಕು,ಅಳಿಯ ಮಗಳು ನಾಳೆ ಬರ್ತಾರೆ) .ರಾಯರ ಎಣಿಕೆ ನಿಜವಾಗಿತ್ತು.ಈ ಸೀನ ರಾಯರು ಸಣ್ಣವರಾಗಿರುವಾಗಲೇ ಕೆಲಸಕ್ಕೆ ಬರುತ್ತಿದ್ದ.ಹೀಗೆ ಏನಾದರು ಸುಳ್ಳು ಹೇಳಿ ದುಡ್ಡನ್ನು ತೆಗೆದುಕೊಂಡು ಹೋಗಿ ಕುಡಿದು ಹಾಳು ಮಾಡುತ್ತಿದ್ದ.ಆದರು ಅವನು ಹೇಳಿದ್ದಕಿಂತ ಸ್ವಲ್ಪ ಕಡಿಮೆ ಆದರು ರಾಯರು ಕೊಡುತ್ತಿದ್ದರು ಯಾಕೆಂದರೆ ಅವ ಬಿಟ್ಟು ಹೋದರೆ ಅಷ್ಟು ಕೆಲಸಕ್ಕೆ ಬರುವವರು ಇರಲಿಲ್ಲ.ಇದು ತಿಳಿದು ಸೀನನೆ ಬೇಕಾದ್ದಕಿಂತ ಒಂಚೂರು ಜಾಸ್ತಿಯೇ ಕೇಳುತ್ತಿದ್ದ.ಹೀಗೆ ಅವರ ನಡುವೆ ಸೋತವರು ಯಾರು ಗೆದ್ದವರು ಯಾರು ಎಂದು ಗೊತ್ತಾಗುತ್ತಿರಲಿಲ್ಲ.ಸರಿ ಎಂದು ರಾಯರು ೩೦೦ ರೂಪಾಯಿ ಕೊಟ್ಟರು.ಒಮ್ಮೆ ತೋಟಕ್ಕೆ ಎಲ್ಲ ಸುತ್ತು ಬಂದು ಕೆಲಸದ ಪ್ರಗತಿಯನ್ನು ನೋಡಿದರು.

ಮತ್ತೆ ಮನೆ ಕಡೆ ಬಂದಾಗ ಸಂಜೆ ೬ ೪೫.ಆದರು ಬ್ರಹ್ಮರಾಯರ ಪತ್ತೆಯೇ ಇಲ್ಲ.ಅಮ್ಮ ಅಪ್ಪ ಎಲ್ಲಿ ಹೋಗಿದ್ದಾರೆ ಎಂದು ಕೇಳಿದಾಗ,ಗೊತ್ತಿಲ್ಲ ಕಣೋ ಅವರಿಗೆಲ್ಲಿ ಹೇಳಿ ಹೋಗುವ ಅಭ್ಯಾಸ ಇದೆ ಎಂದರು.ಎಲ್ಲೆ ಹೋಗಿರಲಿ ಬರ್ತಾರೆ ಬಿಡು ಎಂದರು.
ರಾಯರು ಸ್ನಾನ ಎಲ್ಲ ಮುಗಿಸಿದರು,ಪೇಪರ್ ತಿರುವಿ ಹಾಕಿದರು,ಗಂಟೆ ೮ ಆಯಿತು,ಅದರೂ ಬ್ರಹ್ಮರಾಯರ ಪತ್ತೆಯೇ ಇಲ್ಲ.ಸಂದ್ಯ ನಿನ್ನ ಹತ್ರ ಏನಾದ್ರು ಹೇಳಿದ್ದಾರ ಎಂದರೆ ಇಲ್ಲಪ್ಪ ಎಂಬ ಉತ್ತರ ಬಂತು.ಮಧ್ಯಾನ್ನ ೨ ೩೦ಗೆ ಹೋಗಿದ್ದಾರೆ ಅದೇ ನೀವು ಬಂದ್ರಲ್ಲ ಆಗಷ್ಟೇ ಹೋದದ್ದು ಎಂದರು.ಇನ್ನ್ನು ಅರ್ದ ಗಂಟೆ ನೋಡುವ ಮತ್ತೆ ಏನಾದ್ರು ಮಾಡುವ ಎಂದರು ರಾಯರು.ಆದ್ರೆ ಏನು ಮಾಡುವುದು ಮೊದಲು ಅಡ್ಯನಡ್ಕಕ್ಕೆ ಒಂದು ಫೋನ್ ಮಾಡುವ ಎಂದು ರಾಯರು ಯೋಚಿಸುತ್ತ ಕುಳಿತರು.

ಆಗಲೇ ಫೋನ್ ರಿಂಗಾಗತೊಡಗಿತು.ರಾಯರು ಫೋನ್ ಅನ್ನು ಎತ್ತಿದರು,ಆ ಕಡೆಯಿಂದ ಏನೋ ಹೇಳತೊಡಗಿದರು.ರಾಯರು ಹೌದ?ಯಾವಾಗ?ಎಲ್ಲಿ? ಎನ್ನುತ್ತಿದ್ದರು ಮೈ ಎಲ್ಲ ಬೆವರಿ ಒದ್ದೆಯಾಯಿತು,ಫೋನ್ ರಿಸಿವರ್ ಹಿಡಿದಿದ್ದ ಕೈ ನಡುಗತೊಡಗಿತು.

ಮುಂದುವರೆಯುವುದು......

No comments:

Post a Comment