Sunday, November 8, 2009

ಹೋರಾಟದ ಹಾದಿ

-೨-

ರಾಯರು ಏನೋ ಹೇಳಬೇಕೆಂದು ಬಾಯಿ ತೆರೆದರು, ದ್ವನಿಯೇ ಹೊರಡಲಿಲ್ಲ ಮಾತು ಅರ್ದಕ್ಕೇ ನಿಂತಿತು, ಮೌನವೇ ಮಾತಾಯಿತು,ಕಣ್ಣುಗಳು ತುಂಬಿದವು.ಏನು ಹೇಳಲಿಲ್ಲ,ಹಾಗೆಯೆ ಒಳಗೆ ಹೊರಟು ಹೋದರು.ಆದರೆ ಈ ಘಟನೆ ರಾಯರ ಜೀವನದಲ್ಲಿ ಒಂದು ಮಹತ್ತರ ಬದಲಾವಣೆಗೆ ನಾಂದಿ ಹಾಡಿತು.

ಆವತ್ತು ರಾಯರು ಮೊದಲ ಬಾರಿಗೆ "ಕಲ್ಲಪದವು ಚಾಲೆಂಜರ್ಸ್" ತಂಡವನ್ನು ಪ್ರತಿನಿಧಿಸಿದ್ದರು.ಅಂದು ನಡೆದ ರೋಚಕ ಹೋರಾಟದಲ್ಲಿ ರಾಯರ ತಂಡ ಚಾಂಪಿಯನ್ ಆಗಿತ್ತು.ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ರಾಯರಿಗೆ ಸಿಕ್ಕಿದ ಬಹುಮಾನ ಈಗ ಕಣ್ಣೆದುರು ಪುಡಿ ಪುಡಿಯಾಗಿ ಬಿದ್ದಿದೆ.

ಎಲ್ಲವನ್ನು ಹೇಳುತ್ತಿದ್ದ ರಾಯರು ಮೌನಿಯಾದರು.ಸದ್ದಿಲ್ಲದೆ ತಮ್ಮ ಕೆಲಸ ಮಾಡತೊಡಗಿದರು.ಹಾಗಾಗಿ ಈಗ ಅಮ್ಮನಿಗೆ ಏನು ಆಗುತ್ತಿದೆ, ಎಂಬ ಪೂರ್ಣ ವಿವರ ಸಿಗುತ್ತಿಲ್ಲ.ಅವರ ಅಮ್ಮನು ತಾನಾಗಿ ಏನು ಕೇಳುತ್ತಿರಲಿಲ್ಲ,ರಾಯರು ಏನು ಹೇಳುತ್ತಿರಲಿಲ್ಲ.ಆದರೆ ಅಮ್ಮನಿಗೆ ರಾಯರ ಮೇಲೆ ಪೂರ್ಣ ವಿಶ್ವಾಸ, ಆ ವಿಶ್ವಾಸವನ್ನು ರಾಯರು ಉಳಿಸಿದ್ದರು.ರಾಯರು ದಿನ ಬೆಳಿಗ್ಗೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಇಂಗ್ಲಿಷ್ ಹಾಗು ಹಿಂದಿ ವಾರ್ತೆ ಕೇಳುತ್ತಾ ತಿಂಡಿ ತಿನ್ನುತ್ತಿದ್ದರು.ರಾಯರಿಗೆ ಚಿತ್ರಗೀತೆ ಕೇಳುವ ಹುಚ್ಚು , ಹಿಂದಿ ,ಕನ್ನಡ,ಮಲಯಾಳ ಹೀಗೆ ಹಾಡಿಗೆ ಭಾಷೆಯ ಮಿತಿ ಇರಲಿಲ್ಲ ಯಾವದಾದರು ಆಗುತ್ತಿತ್ತು ,ಫುಲ್ ಸೌಂಡ್ ನೀಡಿ ಕೇಳುತ್ತಿದ್ದರು.ಅದೊಂದು ವಿಶೇಷ ರೇಡಿಯೋ ಬೇರೆ ಯಾರೇ ಇಟ್ಟರು ಕೇಳುತ್ತಿರಲಿಲ್ಲ, ರಾಯರ ಕೈಯಲ್ಲಿ ಮಾತ್ರ ಅದು ಕೇಳುತ್ತಿತ್ತು.ರಾಯರು ಅದನ್ನು ತಟ್ಟಿ ,ಕುಟ್ಟಿ ಕೇಳಿಸುತ್ತಿದ್ದರು,ಮನೆ ಮಂದಿ ಆ ರೇಡಿಯೋದ ಅಸೆ ಬಿಟ್ಟಿದ್ದರಿಂದ ರಾಯರಿಗೆ ತಮ್ಮ ಕಾರ್ಯಕ್ರಮ ಹಾಕಲು ಏನು ತೊಂದರೆ ಆಗುತ್ತಿರಲಿಲ್ಲ.

ರಾಯರು ಹೈಸ್ಕೂಲಿಗೆ ಬಂದ ಮೇಲಂತೂ ಜ್ಞಾನ ಸಂಗ್ರಹದ ಕಡೆಗೆ ತುಂಬಾ ಗಮನ ಹರಿಸಿದರು.ಬೇರೆ ಬೇರೆ ಪುಸ್ತಕ ಕೊಂಡು ಓದಿದರು,ಗ್ರಂಥಾಲಯದಲ್ಲಂತೂ ರಾಯರು ಕಾಯಂ ಆಗಿ ಬಿಟ್ಟಿದ್ದರು. ಪೇಟೆಯಲ್ಲಿಯೇ ಇದ್ದ "ಮೈತ್ರಿ ಬುಕ್ ಸೆಂಟರ್"ನಲ್ಲಿ ರಾಯರಿಗೆ ಬೇಕಾದ ಪುಸ್ತಕಗಳು ದೊರೆಯುತ್ತಿದ್ದವು,ಅಲ್ಲಿ ಇಲ್ಲದವನ್ನು ರಾಯರು ಬೇರೆ ಕಡೆಯಿಂದ ತರಿಸುತ್ತಿದ್ದರು.ರಾಯರು ಬರೆಯಲು ಪ್ರಾರಂಭಿಸಿದರು,ಕವನಗಳು ಕತೆಗಳು ಒಂದೊಂದಾಗಿ ಹೊರ ಬಂದವು. "ವಿ ಜಿ ನಾಯಕ " ,"ರಾಮ ಭಟ್ಟರು " ಇವರ ಕವನವನ್ನು ತಿದ್ದಿದರು, ಇವರ ಬೆಳವಣಿಗೆಗೆ ಶ್ರಮಿಸಿದರು."ನಾಯಕರು ಮತ್ತು ಭಟ್ಟರು" ಕನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ ಅಧ್ಯಾಪಕರು ಇವರ ಮಾರ್ಗದರ್ಶನದಲ್ಲಿ ರಾಯರು ಬೆಳೆದರು.ಅಪಾರವಾದ ಜ್ಞಾನವನ್ನು ತ್ರಿಪದಿಗಳಲ್ಲಿ ಸೆರೆಹಿಡಿದ ಸರ್ವಜ್ಞನಿಂದ ಪ್ರೇರಣೆಗೊಂಡ ರಾಯರು ಅದೇ ಹಾದಿಯಲ್ಲಿ ಕವನ ರಚಿಸಿದರು.ಶಾಲೆಯಲ್ಲಿ ಇದಂತೂ "ಕರ್ಮಜ್ಞನ ತ್ರಿಪದಿಗಳು" ಎಂದೇ ಪ್ರಸಿದ್ದಿಯನ್ನು ಪಡೆಯಿತು.ರಾಯರ "ಪ್ರೇಮ ಕಹಾನಿ" ಕವನ ಸಂಕಲನ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಯಿತು.ಹೀಗೆ ರಾಯರು ನೋಡ ನೋಡುತ್ತಿದ ಹಾಗೆಯೆ ಕವಿಯಾದರು,ಯಾವುದೇ ವಿಷಯದ ಬಗ್ಗೆಯೇ ಅಗಲಿ ಪೂರ್ಣ ತಿಳಿದುಕೊಂಡು ಮಾತಾಡುತ್ತಿದ್ದರು,ವಾದದಲ್ಲಿ ಎಲ್ಲರನ್ನು ಸೋಲಿಸಿದರು.ಉತ್ತಮ ವಾಗ್ಮಿ ಎನಿಸಿಕೊಂಡರು.ಆದರೆ ಇಸ್ಟೆಲ್ಲಾ ಸಾಧನೆ ಮಾಡಿದರೂ,ಏನನ್ನೂ ಮನೆಯಲ್ಲಿ ಹೇಳಲಿಲ್ಲ ,ಬೇರೆ ಮಕ್ಕಳು ಹೇಳುವುದನ್ನು ಕೇಳಿ ರಾಯರ ಅಮ್ಮ ತಿಳಿದುಕೊಂಡರು.ಈ ಬಗ್ಗೆ ಕೇಳಿದಾಗ ರಾಯರು ಏನೋ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುತ್ತಿದ್ದರು.ಅವರಿಗೆ ತಮ್ಮ ಸಾಧನೆಯ ಬಗ್ಗೆ ಹೇಳಿಕೊಳ್ಳುವ ಅಭ್ಯಾಸವೇ ಬಿಟ್ಟುಹೋಗಿ,ಎಸ್ಟೋ ವರ್ಷಗಳೇ ಆಗಿತ್ತು . ಬಾಲ್ಯದಲ್ಲಿ ಏನೋ ಸಾಧಿಸಿದೆ ಎಂದು ಹೇಳಲೆಂದು ಓಡೋಡಿ ಬಂದಾಗ ನಡೆದ ಅನಿರೀಕ್ಷಿತ ಘಟನೆ ಮುಂದೆ ಅವರು ಎಂದೂ ಅವರ ಬಗ್ಗೆ ಹೇಳಿಕೊಳ್ಳದಂತೆ ಮಾಡಿತ್ತು.ರಾಯರಿಗೆ ಒಂದು "ಟೇಪು ರೆಕಾರ್ಡರ್" ಬೇಕು ಎಂಬ ಅಸೆ ಬಹುಕಾಲದಿಂದ ಇತ್ತು. "ಬ್ರಹ್ಮರಾಯರ" ಅನುಮತಿಗಾಗಿ ಕಾದರು.ಕೊನೆಗೆ ಒಂದು ದಿನ "ಬ್ರಹ್ಮರಾಯರಿಂದ" ಅನುಮತಿಯು ದೊರೆಯಿತು.ಆಮೇಲೆ ಒಂದರ ಹಿಂದೆ ಒಂದರಂತೆ "ಕ್ಯಾಸೆಟ್ಟು"ಗಳು ಬಂದವು.ಮನೆಯಿಡಿ ಇದರ ಶಬ್ದವೇ ಕೇಳಿಸುತ್ತಿತ್ತು.ರಾಯರು ಓದುವಾಗ, ಬರೆಯುವಾಗ ತಿಂಡಿ ತಿನ್ನುವಾಗ ಎಲ್ಲ ಒಟ್ಟಲ್ಲಿ ರಾಯರು ಮನೆಯಲ್ಲಿರುವಾಗ "ರೇಡಿಯೋ" , "ಟೇಪು ರೆಕಾರ್ಡರ್ " ಎಲ್ಲವೂ ಕೇಳಿಸುತ್ತಿತ್ತು.ಯಾರು ರಾಯರನ್ನು ಏನು ಹೇಳುತ್ತಿರಲಿಲ್ಲ,ಅಮ್ಮನಂತೂ ಅಂದು ಮಾಡಿದ ತಪ್ಪಿಗೆ ಇಂದೂ ಪಶ್ಚಾತ್ತಾಪ ಪಡುತ್ತಿದ್ದಾರೆ.ಮಗನ ಮನಸ್ಸನ್ನು ಅರಿಯದೇ ಸೋತೆ ಎಂಬತ್ತಾಗಿತ್ತು ಅವರ ಪರಿಸ್ಥಿತಿ.

ರಾಯರು "ಎಸ್ ಎಸ್ ಎಲ್ ಸಿ"ಯಲ್ಲಿರುವಾಗ "ಎಸ್ ಪಿ ಎಲ್ "(ಸ್ಕೂಲ್ ಪೀಪಲ್ ಲೀಡರ್) ಆದರು.ದೊರೆತ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು,ಎಲ್ಲರ ಪ್ರಶಂಸೆಗೆ ಪಾತ್ರರಾದರು.ಆ ವರ್ಷ ಎಂದಿನಂತೆ ಹಗಲು "ಸ್ಕೂಲ್ ಡೇ" ಎಂದಾಗ ರಾಯರು ವಿರೋಧಿಸಿದರು,"ಸ್ಕೂಲ್ ಡೇ " ಏನಿದ್ದರೂ ರಾತ್ರಿಯೇ ಚೆಂದ,ಹಾಗಾಗಿ ರಾತ್ರಿಯೇ ಮಾಡುವ ಎಂದರು.ಅದರೆ ಹಿಂದೆ ಅದ ಕಹಿ ಘಟನೆಗಳು,ರಾತ್ರಿ ಸ್ಕೂಲ್ ಡೇಗೆ ಮಂಗಳ ಹಾಡಿದ್ದವು.ಅದರೆ ರಾಯರು ಎಲ್ಲ ಜವಾಬ್ದಾರಿಯನ್ನು ವಹಿಸಿ,ಏನು ತೊಂದರೆ ಆಗದ ಹಾಗೆ ನಾನು ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದ ಮೇಲೆ ಸಂಚಾಲಕರು ಒಂದು ಅವಕಾಶ ನೀಡಿಯೇ ಬಿಟ್ಟರು.ರಾಯರು ಮೊದಲು ಹಳೆವಿದ್ಯಾರ್ಥಿಗಳನ್ನು ಬೇಟಿ ಮಾಡಿ ಮಾತುಕತೆ ನಡೆಸಿದರು,ಸ್ವಯಂಸೇವಕರ ತಂಡವನ್ನು ಮಾಡಿದರು,ಹೀಗೆ ಊರವರ ಮತ್ತು ವಿದ್ಯಾರ್ಥಿಗಳ ಎಲ್ಲರ ಸಹಕಾರ ಸಹಯೋಗದಿಂದ "ಸ್ಕೂಲ್ ಡೇ"ಯಂತು ಗ್ರ್ಯಾಂಡ್ ಆಗಿ ನಡೆಯಿತು.ರಾಯರ ಶ್ರಮ ಫಲ ನೀಡಿತು.ಎಲ್ಲೆಡೆ ರಾಯರು ಸುದ್ದಿಯಾದರು.ಪ್ರಾಯಶ: ಆ ಶಾಲೆಯಲ್ಲಿ ರಾತ್ರಿ ನಡೆದ "ಸ್ಕೂಲ್ ಡೇ"ಯಲ್ಲಿ ಅದೇ ಕೊನೆಯದು.ಮುಂದೆ ಯಾರು ರಾಯರಂತವರು ಬರಲಿಲ್ಲ ಎಂದು ಇಂದಿಗೂ ಆ ಶಾಲೆಯ ಅಧ್ಯಾಪಕರು ನೆನಪಿಸಿಕೊಳ್ಳುತ್ತಾರೆ.

ರಾಯರು "ಎಸ್ ಎಸ್ ಎಲ್ ಸಿ" ಪಬ್ಲಿಕ್ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಗಳಿಸಿದರು.ಹೇಗೂ ಅಲ್ಲೇ "ಪಿ ಯು ಸಿ" ಇದ್ದುದರಿಂದ ಹೆಚ್ಚೇನು ಯೋಚನೆ ಮಾಡಬೇಕಾಗಿ ಬರಲಿಲ್ಲ.ಅಲ್ಲೇ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡರು.ಈಗ ರಾಯರು ಪೇಪರು, ಸುಧಾ,ತರಂಗ,ಮಯೂರ,ತುಷಾರಗಳಿಗೆ ಕವನ ಲೇಖನಗಳನ್ನು ಕಳಿಸಲು ಪ್ರಾರಂಭಿಸಿದರು. ಇವುಗಳನ್ನು ಪತ್ರಿಕೆಯಲ್ಲಿ ನೋಡಿ ಅಮ್ಮ ತಿಳಿದರು, ಕೇಳಿದಾಗ ರಾಯರು ಹಾ ಹೀಗೆ ಸುಮ್ಮನೆ ಕಳಿಸಿದ್ದೆ ಅವರು ಅದನ್ನು ಪ್ರಕಟಿಸಬೇಕೆ ಎಂದರು.ರಾಯರು "ಪಿ ಯು ಸಿ"ಯಲ್ಲಿದ್ದಾಗ ಅವರ ಮನದಲ್ಲಿ "ಎಂಜಿನಿಯರಿಂಗ್" ಮಾಡಬೇಕೆಂಬ ಮಹತ್ವಾ ಕಾಂಕ್ಷೆಯಿತ್ತು. ಆ ನಿಟ್ಟಿನಲ್ಲಿ ಪ್ರಯತ್ನವನ್ನು ಮಾಡಿದರು.ಅಮ್ಮ ಕೇಳಿದ್ದಕ್ಕೂ ಹಾಗೆ ಅಂದರು."ಪಿ ಯು ಸಿ "ಯಲ್ಲಿಯೂ ರಾಯರನ್ನೇ "ಸಿ ಪಿ ಎಲ್ " ಮಾಡಬೇಕೆಂದು ಪ್ರಿನ್ಸಿಪಾಲರಿಗೆ ಬಹಳ ಅಸೆ ಇತ್ತು.ಆದರೆ ರಾಯರು ವಿಜ್ಞಾನ ವಿಭಾಗದಲ್ಲಿದ್ದರು,"ವಾಣಿಜ್ಯ" ಮತ್ತು "ಕಲಾ"ವಿಭಾಗದಲ್ಲಿ ಅತ್ಯಧಿಕ ವಿಧ್ಯಾರ್ಥಿಗಳು ಇದ್ದದ್ದರಿಂದ,ಮತ್ತು ಅವರು ನಮ್ಮ ವಿಭಾಗದಿಂದಲೇ "ಸಿ ಪಿ ಎಲ್ " ಆಗಬೇಕೆಂದು ಹಠಹಿಡಿದದ್ದರಿಂದ ರಾಯರಿಗೆ "ಸಿ ಪಿ ಎಲ್ " ಆಗಲು ಸಾಧ್ಯವಾಗಲಿಲ್ಲ.ರಾಯರು "ಸಿ ಇ ಟಿ" ಪರೀಕ್ಷೆಯನ್ನು ಬರೆದರು.ಎಲ್ಲ ಪರೀಕ್ಷೆ ಮುಗಿಸಿ ಅರಾಮವಾಗಿದ್ದರು,ಇನ್ನೇನು ರಿಸಲ್ಟ್ ಬಂದ ಮೇಲೆ "ಎಂಜಿನಿಯರಿಂಗ್ "ಗೆ ಹೋಗುವುದು ಎಂಬುದು ರಾಯರ ಯೋಚನೆಯಾಗಿತ್ತು.ಅಮ್ಮನ ಪೂರ್ಣ ಬೆಂಬಲವೂ ಇತ್ತು .ಆದರೆ ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯಿತು ಎಂಬಂತೆ,ಅಲ್ಲಿಯವರೆಗೆ ಮಗನ ವಿದ್ಯಾ ಭ್ಯಾಸದಲ್ಲಿ ವಿಶೇಷ ಆಸಕ್ತಿ ತೋರಿರದ "ಬ್ರಹ್ಮರಾಯರು" ಮಗನ ಬಾಳಲ್ಲಿ ಬಿರುಗಾಳಿಯಾಗಿ ಬಂದರು.

ಮುಂದುವರೆಯುವುದು ................

No comments:

Post a Comment