ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಬಂತು.ನಿರೀಕ್ಷೆಯಂತೆ ರಾಯರು ಮತ್ತೆ ಕಾಲೇಜಿಗೆ ಪ್ರಥಮ.ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರ ಹರಿದು ಬಂತು.ಪ್ರಾಂಶುಪಾಲರು, ಅಧ್ಯಾಪಕರ ಶುಭಾಶಯಗಳನ್ನು ಪಡೆದದ್ದೂ ಆಯಿತು.ತಲೆನೋವಿನ ಕಾಲೇಜು ಜೀವನಕ್ಕೆ ಸ್ವಲ್ಪ ವಿರಾಮ ಸಿಕ್ತ್ತು. "ಸಿ ಇ ಟಿ"ಯ ಪಲಿತಾಂಶ ಇನ್ನೂ ಬಂದಿರಲಿಲ್ಲ. ರಾಯರು ತಮ್ಮ ಬರವಣಿಗೆಗೆ, ಓದುವುದಕ್ಕೆ ಬೇಕಾದಷ್ಟು ಸಮಯ ಸಿಕ್ಕಿತು.ಇನ್ನೇನು ರಾಯರು ಇಂಜಿನಿಯರಿಂಗ್ ಮಾಡುವುದೆಂದು ಊರಲ್ಲೆಲ್ಲ ಸುದ್ದಿಯಾಯಿತು.
ಅಂದು ಮಂಗಳವಾರ ಮಧ್ಯಾನ್ನ ೨.೩೦ ಗಂಟೆಗೆ ಬ್ರಹ್ಮರಾಯರು ಮನೆಗೆ ಬಂದರು.ಉರಿ ಉರಿ ಬಿಸಿಲು ,ಬಂದವರೇ ರಾಯರನ್ನು ಬಳಿ ಕರೆದು ಮಾತಾಡಿಸತೊಡಗಿದರು.ಈ ಮಾಸ್ಟ್ರ ಕೆಲಸದ ಬಗ್ಗೆ ನಿನ್ನ ಅಭಿಪ್ರಾಯ ಏನು?ಎಂದರು.ಹಾ ಪರವಾಗಿಲ್ಲ ಗೊರ್ಮೆಂಟ್ ಸಂಬಳ,ತಲೆ ಬಿಸಿ ಇಲ್ಲ ಎಂದರು ರಾಯರು.ಬ್ರಹ್ಮರಾಯರ ಮುಖ ಅರಳಿತು,ನನ್ನ ದಿಕ್ಕಿನಲ್ಲೇ ಯೋಚನೆ ಮಾಡುತ್ತಿದ್ದಿಯ ಪರವಾಗಿಲ್ಲ ಎಂದರು.ಹೌದು ಈಗ ಈ ವಿಷಯ ಯಾಕೆ ಕೇಳಿದರು ಎಂದು ರಾಯರಿಗೆ ಅರ್ಥವಾಗಲಿಲ್ಲ.ಅದು ಇದು ಮಾತಾಡಿಸಿ ಬ್ರಹ್ಮರಾಯರು ಮೆಲ್ಲ ಜಾಗ ಖಾಲಿ ಮಾಡಿದರು.ರಾಯರು ತಮ್ಮ ಕೆಲಸ ಮುಂದುವರೆಸಿದರು.
ಇದು ನಡೆದು ಸರಿಯಾಗಿ ೩ ದಿನ ಕಳೆದು ೪ನೆ ದಿನ ಅಂದರೆ ಶನಿವಾರ ಮಧ್ಯಾನ್ನ ಮತ್ತೆ ಬ್ರಹ್ಮರಾಯರು ಬಂದರು.ಆದರೆ ಈಗ ಕೈಯಲ್ಲಿ ೪-೫ ಕಾಲೇಜಿನ "ಪ್ರೋಸ್ಪೆ ಟಸ್ ",ರಾಯರನ್ನು ಕರೆದು ನಾನು ಎಲ್ಲ ಕಡೆ ವಿಚಾರಿಸಿದೆ ಈ ಕಾಲೇಜುಗಳಲ್ಲಿ ನಿನಗೆ ಆರಾಮವಾಗಿ ಸೀಟು ಸಿಗಬಹುದು ನೀನು "ಬಿ ಎಸ್ ಸಿ"ಯನ್ನು ಆರಾಮವಾಗಿ ಮಾಡಬಹುದು ಮನೆಯಿಂದಲೇ ಹೋಗಿ ಬಂದು ಮಾಡಬಹುದು ಎಂದರು.ರಾಯರಿಗೆ ಒಂದು ಕ್ಷಣ ಏನು ಆಗುತ್ತಿದೆ ಎಂದೆ ಗೊತ್ತಾಗಲಿಲ್ಲ ನಾನೇನು ಎಲ್ಲರು ಇವನು ಇಂಜಿನಿಯರಿಂಗ್ ಮಾಡಬಹುದು ಎಂದು ಯೋಚಿಸುತ್ತಿರುವಾಗ ಇದು ಯಾವುದೋ "ಕಾಲೇಜಿನ ಪ್ರೋಸ್ಪೆಟಸ್ " "ಬಿ ಎಸ್ ಸಿ" ,"ಮನೆಯಿಂದ ಹೋಗಿ ಬಾ" ಏನಿದು?ರಾಯರು ಅಲ್ಲೇ ಮಂಕು ಬಡಿದವರಂತೆ ನಿಂತು ಬಿಟ್ಟರು.ಆಮೇಲೆ ಸುಧಾರಿಸಿ ನನಗೆ "ಇಂಜಿನೀಯರಿಂಗ್" ಮಾಡಬೇಕೆಂದಿದೆ ಎಂದರು.ಬ್ರಹ್ಮರಾಯರು ಕಿವಿಗೆ ಹಾಕಿಕೊಳ್ಳಲಿಲ್ಲ,ನನಗೆ ಹೇಳಿಯೇ ಇಲ್ಲ ಎಂಬಂತೆ ತೋಟಕ್ಕೆ ಹೊರಟು ಹೋದರು.
ಇದೆಲ್ಲವನ್ನೂ ದೂರದಲ್ಲೇ ನಿಂತು ರಾಯರ ತಾಯಿ ನೋಡುತ್ತಿದ್ದರು,ಏನು ಹೇಳಲಿಲ್ಲ ಸರಿಯಾದ ಅವಕಾಶಕ್ಕಾಗಿ ಕಾಯುತ್ತಿದ್ದರು.ಬ್ರಹ್ಮರಾಯರು ಇವರ ಹತ್ತಿರ ಹೇಗೆ ನಮ್ಮ ಮೂರ್ತಿಗೆ ಪುತ್ತೂರಲ್ಲೇ ಸೀಟು ಸಿಗಬಹುದು ಎಂದಾಗ ಕೋಪ ತಡೆಯದೆ ಅಲ್ಲ ಅವನಿಗೆ "ಇಂಜಿನೀಯರಿಂಗ್" ಮಾಡಬೇಕೆಂದಿದೆ ನೀವ್ಯಾಕೆ ಏನೇನೋ ಹೇಳಿ ಅವನ ತಲೆ ಕೆಡಿಸುತ್ತಿದ್ದೀರಿ ಎಂದು ಆಕ್ಷೇಪಿಸಿದಾಗ, ಎಲ್ಲಿಗೆ "ಇಂಜಿನೀಯರಿಂಗ್"? ಇರುವುದು ಒಬ್ಬ ಅವನು ದೂರಕ್ಕೆ ಕಲಿಯಲು ಹೋದರೆ ಇಲ್ಲಿ ನಮಗ್ಯಾರಿದ್ದರೆ ಎಂದರು.ರಾಯರ ತಾಯಿಯು ಬಿಟ್ಟು ಕೊಡಲಿಲ್ಲ,ನಮ್ಮ ಸ್ವಾರ್ಥಕ್ಕೆ ಅವನು ಯಾಕೆ ಬಲಿಯಾಗಬೇಕು ಅವನು ಹೋಗಲಿ, ಅವನಿಗೆ ಇಷ್ಟ ಇದ್ದದ್ದನ್ನು ಕಲಿಯಲಿ ಸುಮ್ಮನೆ ಯಾಕೆ ಹಠ ಎಂದರು.ಹೀಗೆ ರಾತ್ರಿಯೆಲ್ಲಾ ವಾದ ವಿವಾದದಲ್ಲೇ ಕಳೆಯಿತು.
ಬ್ರಹ್ಮರಾಯರಿಗೆ ಮಗ ತನ್ನಂತೆ ಅಧ್ಯಾಪಕನಾಗಬೇಕು ಎಂಬ ಬಯಕೆ.ಇತ್ತ ರಾಯರಿಗೆ ನಾನು ಕಂಪನಿಗೆ ಹೋಗಬೇಕು, ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕು ಎಂಬಾಸೆ.ಅಮ್ಮನದು ತಟಸ್ತ ಧೋರಣೆ,ಮಗನಿಗೆ ಏನಾಗಬೇಕೋ ಅದಕ್ಕೆ ಹೋಗಲಿ ಒಟ್ಟು ಮಕ್ಕಳ ಮನಸ್ಸಿಗೆ ನೋವಾಗಬರದು ಎನ್ನುವ ನೀತಿ.ಬ್ರಹ್ಮರಾಯರಿಗೆ ಒಮ್ಮೆ ಒಂದು ಆಗಬೇಕು ಎಂದು ಎನಿಸಿದರೆ ಅದನ್ನು ಏನಾದರು ಮಾಡದೇ ಬಿಡುವವರಲ್ಲ.ಅವರ ಪತ್ನಿಯು ಹಾಗೆ,ಒಮ್ಮೆ ಹಟಕ್ಕೆ ಬಿದ್ದರೆ ಸಾಧಿಸದೆ ಬಿಡುವವರಲ್ಲ.ಆಮೇಲೆ ಬ್ರಹ್ಮರಾಯರ ಮಾತು ನಡೆಯುವುದಿಲ್ಲ.ಆದರೆ ರಾಯರು ಹಾಗಲ್ಲ,ಯಾವುದೇ ಒಂದು ಬೇಕೇ ಬೇಕು ಎಂದು ಹಠ ಮಾಡಿದವರಲ್ಲ.
ಬ್ರಹ್ಮರಾಯರಿಗೆ ಮಗ ದೂರಕ್ಕೆ ಹೋಗುವುದು ಒಂಚೂರು ಇಷ್ಟ ಇಲ್ಲ.ಅವನು ದೂರ ಹೋದರೆ ಇಲ್ಲಿ ನಮಗೆ ಯಾರಿದ್ದಾರೆ,ಏನಾದರು ಆದರೆ ಅಥವಾ ಅವನಿಗೆ ಅಲ್ಲಿ ಏನಾದರು ಆದರೆ ಯಾರಿದ್ದಾರೆ,ಪ್ರಾಣದ ಭಯ.ಒಟ್ಟಲ್ಲಿ ಮಗ ಕಣ್ಣ ಮುಂದೆ ಬೇಕು.ಇತ್ತ ರಾಯರೋ ನವಯುವಕ ಹೊಸ ಹೊಸ ಆಸೆ ಮನದಲ್ಲಿ ಮೂಡುವ ಸಮಯ.ರಾಯರಿಗೆ ಅಧ್ಯಾಪನ ವೃತ್ತಿಯಲ್ಲಿ ಏನೇನೂ ಆಸಕ್ತಿ ಇಲ್ಲ ಅದು ಏನಿದ್ದರು ೪೦ ವರ್ಷ ಕಳೆದ ಮೇಲೆ ಎಂಬುದು ಅವರ ಯೋಚನೆ.ಅದೂ ಅಲ್ಲದೆ ಆಗಲೇ ಗೊರ್ಮೆಂಟ್ ಉದ್ಯೋಗ ಸಿಗುತ್ತದೆ ಎಂದು ಯಾವುದೇ ಭರವಸೆ ಇಲ್ಲ.ಉದ್ಯೋಗವಾಗದಿದ್ದರೆ ಖರ್ಚಿಗೆ ಸಾಕಗುವಸ್ಟು ತೋಟವು ಇಲ್ಲ.ಅಲ್ಲಿ ಇಲ್ಲಿ ಒಂದೋ ಇಲ್ಲವೇ ಎರಡು ಸಾವಿರಕ್ಕೆ ಕಾಲೇಜಿಗೆ ಗೌರವ ಅಧ್ಯಾಪಕರಾಗಿ ಕೆಲಸ ಮಾಡಬೇಕು.ಯಾರಿಗೆ ಬೇಕು ಈ ತಾಪತ್ರಯ,ಚೆನ್ನಾಗಿ ಕಲಿತು ಒಂದು ಒಳ್ಳೆ ಕಂಪೆನಿಗೆ ಸೇರಿದರೆ ಆಯಿತು ಮುಂದೆ ಹೇಗಿದ್ದರೂ ಮನೆ ಮಠ ನೋಡುವುದು ಇದ್ದೆ ಇದೆ,ಈಗ ತಂದೆ ತಾಯಿ ಗಟ್ಟಿ ಇದ್ದಾರೆ,ಅವರಿಗೆ ಬೇಕಾದ ಹಾಗೆ ಮನೆ ತೋಟ ನೋಡಿಕೊಳ್ಳಲಿ ಎಂದು ರಾಯರು ಯೋಚಿಸಿದ್ದರು.
ಆದರೆ ಯಾವಾಗ ಬ್ರಹ್ಮರಾಯರಿಗೆ ತಾಯಿಯ ಪೂರ್ಣ ಬೆಂಬಲ ಮಗನಿಗೆ ಇದೆ ಎಂದು ಗೊತ್ತಾಯಿತೋ,ಅಂದಿನಿಂದ ಅವರು ಬಹಳ ಜಾಗ್ರತರಾದರು.ಏನೇ ಆದರು ಅವ ಇಂಜಿನೀಯರಿಂಗ್ ಮಾಡುವುದು ಬೇಡ,ಎಂದು ಮನದಲ್ಲೇ ನಿರ್ಧರಿಸಿದರು.ಬಹಳ ಜಾಗರೂಕತೆಯಿಂದ ತಮ್ಮ ಮುಂದಿನ ನಡೆಯನ್ನು ನಿರ್ಧರಿಸಿದರು.ಮಗನನ್ನು ತೋಟಕ್ಕೆ ಕರೆಯುವುದು ಅಲ್ಲಿ ಟೀಚಿಂಗ್ ಬಗ್ಗೆ ಮಾತಾಡುವುದು,ಭಾಷಣ ಮಾಡುವುದು ಇವೆಲ್ಲವೂ ತಾಯಿಯ ಗಮನಕ್ಕೆ ಬಾರದಂತೆ ನಡೆಯಿತು.ರಾಯರಿಗೂ ಕೇಳಿ ಕೇಳಿ ಬೇಸತ್ತಿತು.ಅವರು ಮನದಲ್ಲೇ ಏನೋ ಒಂದು ಲೆಕ್ಕಾಚಾರ ಹಾಕಿದರು.ಆದರೆ ತಮ್ಮ ಅಭಿಪ್ರಾಯ ತಿಳಿಸಲಿಲ್ಲ,ಇತ್ತ "ಸಿ ಇ ಟಿ" ರಿಸಲ್ಟ್ ಬಂತು.ರಾಯರು ಎಷ್ಟು ಬೇಸತ್ತಿದರೆಂದರೆ ತಮ್ಮ ರಿಸಲ್ಟ್ ನ್ನು ನೋಡಲೇ ಹೋಗಲಿಲ್ಲ.
ಬ್ರಹ್ಮರಾಯರು ಹೋಗಿ ನೋಡಿ ಬಂದರು.ಈಗ ಅವರ ಹ್ರದಯದ ಬಡಿತ ಮತ್ತಷ್ಟು ಹೆಚ್ಚಾಯಿತು.ಒಳ್ಳೆ ಯ ರಾಂಕಿಂಗ್ ಪಡೆದಿದ್ದ ಕಾರಣ ಈಗ ಬೇರೆಯವರು ನನ್ನ ಮೇಲೆ ಒತ್ತಡ ತರಬಹುದು,ಏನಪ್ಪಾ ಮಾಡುವುದು? ನಾನು ಕಳಿಸದಿದ್ದರೆ ಹೇಗೆ? ಹೀಗೆ ಯೋಚನೆಯಲ್ಲೇ ೩ ದಿನ ಕಳೆದರು.ಏನೇ ಆದರು ಮೊದಲು ಮೂರ್ತಿಯ ಬಾಯಿಂದಲೇ ನನಗೆ ಇಂಜಿನೀಯರಿಂಗ್ ಬೇಡ ಎಂದು ಹೇಳಿಸಬೇಕೆಂದು ತೀರ್ಮಾನಿಸಿದರು.ಆಗ ನನ್ನ ಕೆಲಸವೂ ಸುಲಭ ಎಂಬ ತೀರ್ಮಾನಕ್ಕೆ ಬಂದರು.ಬ್ರಹ್ಮರಾಯರು ತಮ್ಮ ಕೊನೆಯ ಪ್ರಯತ್ನವೆಂಬಂತೆ ಮಗನನ್ನು ಕರೆದುಕೊಂಡು ವಿಟ್ಲದ "ಪಂಚಮಿ" ಹೋಟೆಲಿಗೆ ಹೋದರು.೨ ಟೀ ಎಂದರು.
ಬ್ರಹ್ಮರಾಯರು "ಇಮೊಶನಲ್ ಬ್ಲಾಕ್ಮೇಲ್" ಪ್ರಾರಂಭಿಸಿದರು.ನೋಡು ನನ್ನಲ್ಲಿರುವ ದುಡ್ಡು ಇಂಜಿನೀಯರಿಂಗ್ ಗೆ ಎಲ್ಲ ಸಾಕಾಗಲ್ಲ,ಅಮ್ಮನಿಗೆ ಅಸ್ಟು ಹುಷಾರಿಲ್ಲ,ನನಗು ವಯಸ್ಸಾಗುತ್ತ ಬಂತು,ಈಗ ನೀನು "ಬಿ ಎಸ್ ಸಿ" ಮಾಡಿದರೆ ಉಪಕಾರವಾಗುತ್ತಿತ್ತು.ಮತ್ತೆ ನಿನಗೆ ಇಂಜಿನೀಯರಿಂಗ್ ಮಾಡಲೇಬೇಕೆಂದಿದ್ದರೆ ಮಾಡಬಹುದು,ಆತ್ಮಹತ್ಯೆ ಎಲ್ಲ ಮಾಡೋಕೆ ಹೋಗಬೇಡ, ಮತ್ತೆ ನನಗೆ ಬೇರೆ ದಾರಿ ಇಲ್ಲ,ಸಾಲವ ಮೂಲವ ಹೇಗಾದರೂ ಕಳಿಸುತ್ತೇನೆ,ನೋಡು ಏನೂಂತ ಆಲೋಚನೆ ಮಾಡು ಎಂದರು.ಹೀಗೆ ಬ್ರಹ್ಮರಾಯರು ಒಂದೊಂದೇ ಮನೆ ಸಂಕಟವನ್ನು ಮಗನ ಮುಂದೆ ಹೇಳಿದರು,ಅತ್ತರು,ದುಖಿ:ಸಿದರು.
ಸುಮಾರು ೨ ಗಂಟೆಗಳ ಕಾಲ ನಡೆದ ನಾಟಕದಲ್ಲಿ ಕೊನೆಗೆ ಬ್ರಹ್ಮರಾಯರು ಗೆದ್ದರು.ವಿಟ್ಲದ ಹೋಟೆಲಿನಲ್ಲಿ ನಡೆದ ಈ ಘಟನೆ ಇಂದಿಗೂ ಯಾರಿಗೂ ಗೊತ್ತಿಲ್ಲ.ಅದು ಒಂದು ನಿಘೂಡ ಕತೆಯಾಗಿಯೇ ಉಳಿದಿದೆ.
ಜೂನ್ ೧೨ನೆ ತಾರೀಕಿನಂದು ರಾಯರು ಪುತ್ತೂರಿನ ಮಹಾರಾಜ ಕಾಲೇಜಿನಲ್ಲಿ "ಬಿ ಎಸ್ ಸಿ"ಗೆ ಸೇರಿದರು. "ಇಲೆಕ್ಟ್ರೋನಿಕ್ಸ್ ಅಂಡ್ ಕಮ್ಯುನಿಕೆಶನ್" ವಿಷಯವನ್ನು ಆಯ್ದುಕೊಂಡರು.ಅಮ್ಮ ಕೇಳಿದಾಗ ಎಂಜಿನಿಯರಿಂಗ್ ಗೆ ಎಲ್ಲ ತುಂಬ ದುಡ್ಡು ಬೇಕಲ್ಲ,ನಂಗೆ "ಬಿ ಎಸ್ ಸಿ" ಆದೀತು ಎಂದರು.ಎಲ್ಲಿಯೂ ತಂದೆ ಅತ್ತದ್ದು, ಪೀಡಿಸಿದ್ದು ಹೇಳಲಿಲ್ಲ.ಅಮ್ಮನು ಏನೋಪ್ಪ ನಿನ್ನಿಸ್ಟ ಎಂದರು.ಊರಲ್ಲಿ ಬ್ರಹ್ಮರಾಯರು ದುಡ್ಡಿಲ್ಲ ಎಂದರಂತೆ ಎಂದು ಸುದ್ದಿಯಾಯಿತು.ಬಿಸಿ ಬಿಸಿಗೆ ೪ ದಿನ ಊರಲ್ಲಿ ಆಡಿಕೊಂಡರು,ಛೆ ಒಳ್ಳೆ ಹುಡುಗ ಎಂಜಿನಿಯರಿಂಗ್ ಗೆ ಕಳಿಸಬಹುದಿತ್ತು ಎಂದರು.ಮತ್ತೆ ಎಲ್ಲರಿಗು ಅವರವರ ಪಾಡು.
ಆದದ್ದಕ್ಕೆ ರಾಯರು ಮರುಗಲಿಲ್ಲ,ಮುಂದಿನ ಹೆಜ್ಜೆಯ ಕುರಿತು ಯೋಚಿಸತೊಡಗಿದರು.ಹಾಗಾದರೂ ತಂದೆಗೆ ಸಮಾಧಾನವಾಯಿತಲ್ಲ ಎಂಬ ತೃಪ್ತಿ ಅವರದು.ತಂದೆಯ ಮಾತನ್ನು ನಡೆಸಿದ ಆ ಶ್ರೀರಾಮನೆ ಇವರೇನೋ ಎಂಬಂತಿತ್ತು ಅವರ ನಡೆ ನುಡಿ."ಬಿ ಎಸ್ ಸಿ" ತರಗತಿಗಳು ಪ್ರಾರಂಭವಾದವು.ಬೆಳಿಗ್ಗೆ ೯ ರಿಂದ ಸಂಜೆ ೩ರವರೆಗೆ ಕ್ಲಾಸ್ ಇತ್ತು.ಆದರೆ ಈಗ ಮಾತ್ರ ರಾಯರಿಗೆ ಸ್ವಲ್ಪ ತೊಂದರೆ ಆಗಲು ಸುರುವಾಯಿತು.
ರಾಯರ ಬೆಳಗ್ಗಿನ ಸುಖ ನಿದ್ದೆಗೆ ಬಂಘ ಬಂದಿತ್ತು.೭.೩೦ಗೆ ಅಡ್ಯನಡ್ಕದಿಂದ ಬಸ್ ಇತ್ತು,ಅಲ್ಲಿಗೆ ತಲುಪಲು ಕನಿಸ್ತ್ತ ಎಂದರು ೨೦ ನಿಮಿಷ ಬೇಕಿತ್ತು,ಹಾಗಾಗಿ ರಾಯರು ೭ ಗಂಟೆಗೆ ಮನೆ ಬಿಡಬೇಕಿತ್ತು.ಸ್ಟೂಡೆಂಟ್ ಗಳು ಬಸ್ ಲ್ಲಿ ಹೋಗುವ ಗಮ್ಮತ್ತೆ ಬೇರೆ,ಸ್ಟೆಪ್ ಮೇಲೆ ನಿಂತುಕೊಂಡು ಬ್ಯಾಗನ್ನು ಇನ್ಯಾರೋ ಕುಳಿತವರ ಮೇಲೆ ಹಾಕಿ ರೈಟ್ ರೈಟ್ ಪೋಯಿ ಪೋಯಿ(ಹೋಗುವ) ಎಂದು ಕಿರುಚುತ್ತ ಹೋಗುತ್ತಿದ್ದರು.ಸುಮಾರು ೧ ಗಂಟೆ ಬಸ್ ಲ್ಲಿ ಪ್ರಯಾಣ ೮.೩೦ ಗೆ ಪುತ್ತೂರು,ಅಲ್ಲಿಂದ ೧೦ ನಿಮಿಷದ ದಾರಿ ಕಾಲೇಜಿಗೆ. ಇದು ನಿತ್ಯದ ರೂಢಿ.ಸಂಜೆ ಮನೆಗೆ ತಲುಪುವಾಗ ೫.೩೦ ಆಗುತ್ತಿತ್ತು.
ರಾಯರು ಕಾಲೇಜಿನಲ್ಲಿ ಬಹಳ ಬೇಗನೆ ಪ್ರವರ್ಧಮಾನಕ್ಕೆ ಬಂದರು.ರಾಯರ ಕವನ,ಕತೆಗಳು ಇಂಗ್ಲಿಷ್,ಹಿಂದಿ ಭಾಷೆಗಳಲ್ಲೂ ಬಂದವು.ಕಾಲೇಜಿನ "ಚಿಗುರು" ಎಂಬ ಸಾಹಿತ್ಯ ಸಂಘ ವನ್ನು ಸೇರಿದರು."ಎಡಿಟೋರಿಯಲ್ ಬೋರ್ಡ್"ನ ಮೆಂಬರ್ ಆದರು.
ಕಾಲೇಜಿನ ಸ್ಪರ್ಧೆಗಳಲ್ಲಿ ಎಲ್ಲ ರಾಯರ ಸಾಧನೆ ಮೊದಲಿನ ಹಾಗೆಯೆ ಮುಂದುವರೆದಿತ್ತು.ನಾಯಕತ್ವ ಗುಣವು ಎಲ್ಲರ ಮೆಚ್ಚುಗೆ ಗಳಿಸಿತ್ತು .ಆದರೆ ರಾಯರು ಯಾವುದೇ "ಸಿ ಆರ್" ಹುದ್ದೆಗೆ ನಿಲ್ಲಲಿಲ್ಲ.ರಾಯರದು ಏನಿದ್ದರು ಸಾಂಸ್ಕೃತಿಕ ವಿಚಾರಗಳಲ್ಲಿ ಬಹಳ ಆಸಕ್ತಿ."ಸಿ ಅರ್", "ವಿ ಪಿ" ಮುಂತಾದ ರಾಜಕೀಯಗಳಿಂದ ರಾಯರು ದೂರವೇ ಉಳಿದಿದ್ದರು.ಕಾಲೇಜಿನಲ್ಲಿ ನಡೆಯುವ ರಾಜಕೀಯದಿಂದ ರಾಯರು ಬೇಸತ್ತಿದ್ದರು.ಆದರೆ ಏನು ಮಾಡಲು ಆಗುವುದಿಲ್ಲ,ಇದೆಲ್ಲ ಜೀವನದ ಒಂದು ಭಾಗ ಎಂದು ನಂಬಿದ್ದರು.
ರಾಯರು ನನಗೊಂದು ಕ್ಯಾಮರ ಬೇಕೆಂಬ ಬೇಡಿಕೆಯನ್ನು ಬಹಳ ದಿನದ ಹಿಂದೆಯೇ ಇಟ್ಟಿದ್ದರು.ಆದರೆ ಇದೆಲ್ಲ ಒಂದೆರಡು ದಿನದಲ್ಲಿ ಆಗುವುದಲ್ಲ,ದಿನ ಕೇಳಿ,ಕೇಳಿ ಕೊನೆಗೆ ಒಂದು ತಿಂಗಳ ನಂತರ ಕ್ಯಾಮೆರ ದೊರೆಯಿತು.ಮುಂದೆ ರಾಯರಿಗೆ ಕ್ಯಾಮೆರ ಹಿಡಿದುಕೊಂಡು "ಕಲ್ಲಪದವು" ಗುಡ್ಡದಲ್ಲಿ ತಿರುಗುವುದೇ ಕೆಲಸ.ಭಾನುವಾರವಂತೂ ಕಾಣಲೇ ಸಿಗುತ್ತಿರಲಿಲ್ಲ,ತಲೆಯಲ್ಲಿ ಒಂದು ಕ್ಯಾಪು,ಕೈಯಲ್ಲಿ ಕ್ಯಾಮರ ಹಿಡಿದು ಪಕ್ಕದಲ್ಲೇ ಇದ್ದ ಕಾಡಿನಲ್ಲಿ ಸುತ್ತಲು ಹೋಗುತ್ತಿದ್ದರು.ನಿಸರ್ಗದ ರಮಣೀಯ ನೋಟವನ್ನು ತನ್ನ ಕ್ಯಾಮೆರದಲ್ಲಿ ಸೆರೆ ಹಿಡಿದರು.ಹೀಗೆ ನಡೆಯುತ್ತಿರಬೇಕಾದರೆ ಕಾಲೇಜಿನಲ್ಲಿ ಒಂದು ಛಾಯಾಗ್ರಹಣ ಸ್ಪರ್ಧೆ ಏರ್ಪಟ್ಟಿತು,ಅದಕ್ಕೆ ರಾಯರು ಸಿದ್ದವಾದರು.ಮನೆಯ ಮುಂದೆ ಇದ್ದ ಹೂವಿನ ಮೇಲೆ ತೆಳುವಾಗಿ ಪೆವಿಕಾಲ್ ಗಮ್ ಹಾಕಿ ಕಾದು ಕುಳಿತರು.ಹೂವಿನ ಮೇಲೆ ವಿವಿಧ ಭಂಗಿಗಳಲ್ಲಿ ಕುಳಿತ ದುಂಬಿಯ ಫೋಟೋ ತೆಗೆದರು.ಸ್ಪರ್ಧೆಗೆ ಕಳಿಸಿದರು,ಪ್ರಥಮ ಬಹುಮಾನ ಬಂದದ್ದೂ ಆಯಿತು.ಹೀಗೆ ರಾಯರು ನೋಡನೋಡುತ್ತಿದ್ದಂತೆಯೇ ಫೋಟೋಗ್ರಾಫರ್ ಆಗಿ ಹೋದರು.
ಆಗ ಅಡ್ಯನಡ್ಕದಲ್ಲಿ "ಕರಾಟೆ ಕ್ಲಾಸ್" ಭಾರಿ ಪ್ರಚಾರ ಪಡೆಯಿತು.ರಾಯರಿಗೂ ಇಂಟರೆಸ್ಟ್ ಬಂತು.ರಾಯರು ಅದರ ಬಗ್ಗೆ ಕೇಳಲು ಹೋದರು.ಮೊದಲು ಒಂದು ಜೊತೆ ಬಿಳಿ ಪ್ಯಾಂಟು ಅಂಗಿ ರೆಡಿ ಮಾಡಿ ಬನ್ನಿ ಎಂದರು.ಪ್ಯಾಂಟು ಅಂಗಿ ಹೋಲಿಸಿದ್ದು ಆಯಿತು.೨೫೦೦ ಫೀಸ್ ನೀಡಿ ರಾಯರು ಸೇರಿದರು.ಬರುವ ಭಾನುವಾರದಿಂದ ಕ್ಲಾಸ್ ಪ್ರಾರಂಭ.ಈಗ ರಾಯರು ಮನೆಯಲ್ಲಿ ಬಿಳಿ ಬಟ್ಟೆ ಹಾಕಿ ಏನೋ ಮೊದಲೇ ಗೊತ್ತಿದ್ದವರ ಹಾಗೆ ಅಭ್ಯಾಸ ಮಾಡುತ್ತಿದ್ದರು.ಉತ್ಸಾಹದ ಭರದಲ್ಲಿ ಅರ್ಧ ಗಂಟೆ ಮೊದಲೇ ಹೋಗಿ ಕಾದು ಕುಳಿತರು.ರಾಯರಂತೆ ಇನ್ನು ಹತ್ತು ಇಪ್ಪತ್ತು ಜನ ಬಂದಿದ್ದರು,ಎಲ್ಲರೂ ಕಾದರು,೧ ಗಂಟೆ ಕಳೆಯಿತು,ಆದರು ಮಾಸ್ತರ ಪತ್ತೆಯೇ ಇಲ್ಲ.ಇನ್ನು ಕಾದು ಪ್ರಯೋಜನವಿಲ್ಲ ಎಂದು ರಾಯರು ಮನೆಗೆ ಬಂದರು.ಮುಂದಿನ ವಾರವೂ ಇದೆ ಪರಿಸ್ತಿತಿ.ಈಗ ಎಲ್ಲರಿಗೂ ನಿಧಾನವಾಗಿ ಅರ್ಥವಾಗತೊಡಗಿತು,ನಾವೆಲ್ಲ ಟೊಪ್ಪಿ ಹಾಕಿಸಿಕೊಂಡಿದ್ದೇವೆ ಎಂದು.ರಾಯರ ಕರಾಟೆ ಕಲಿಯಬೇಕೆಂಬ ಅಸೆ ಹೀಗೆ ಅರ್ಧಕ್ಕೆ ನಿಂತುಹೋಯಿತು.ಹೋಲಿಸಿದ ಅಂಗಿ ಹಾಕಲು ಆಗದೆ ಬಿಟ್ಟು ಬಿಡಲು ಆಗದ ಪರಿಸ್ತಿತಿ ರಾಯರದು.ಇನ್ನು ಎಷ್ಟು ಯೋಚನೆ ಮಾಡಿಯೂ ಪ್ರಯೋಜನವಿಲ್ಲ,ಒಂದೆರಡು ದಿನ ತಲೆಬಿಸಿ ಮಾಡಿ ಮತ್ತೆ ಮರೆತು ಬಿಟ್ಟರು.
ಇದು ರಾಯರನ್ನು ಜೀವನದಲ್ಲಿ ಮುಂದೆಂದೂ ಟೊಪ್ಪಿ ಹಾಕಿಸದಸ್ಟು ಜಾಗೃತರನ್ನಾಗಿ ಮಾಡಿತ್ತು.
ಕಾಲೇಜಿನ ಭಾಗವಾಗಿ "ಪ್ರಾಣ ಚೈತನ್ಯ ಚಿಕಿತ್ಸೆ " ಶಿಬಿರ ನಡೆಯಿತು.ರಾಯರು ಉತ್ಸಾಹದಿಂದ ಪಾಲ್ಗೊಂಡರು.ಇದನ್ನು ಕಲಿತರು.ಹೀಗೆ ಏನೆಲ್ಲಾ ಕಲಿಯಲು ಸಾಧ್ಯವೂ ಅದನ್ನೆಲ್ಲ ಕಲಿಯುತ್ತ ಸಾಗಿದರು."ಪ್ರವಾಸ" ರಾಯರ ಅಚ್ಚುಮೆಚ್ಚಿನ ಚಟುವಟಿಕೆಗಳಲ್ಲೊಂದು.ಸಹಪಾಠಿಗಳ ಜೊತೆ ಸೇರಿ ಪ್ರವಾಸವನ್ನು ಆಯೋಜಿಸಿದರು."ಕುಮಾರ ಪರ್ವತ"ವೇರಿದರು.ಊರೆಲ್ಲ ಸುತ್ತಿದರು.ಒಳ್ಳೆಯ ಸಂಘಟನೆ ಮಾಡಿದರು.ಫೋಟೋ ತೆಗೆದರು.ಪ್ರವಾಸ ಕಥನ ಬರೆದರು.ಹೀಗೆ ೩ ವರುಷಗಳ ಈ ಕಾಲೇಜು ಜೀವನದ ಪ್ರತಿ ಕ್ಷಣವನ್ನು ಆನಂದಿಸಿದರು.ಎಂದು ಹಿಂದಿನದನ್ನು ಯೋಚಿಸಿ ಮರುಗಲಿಲ್ಲ,ಬದಲಾಗಿ ಮುಂದೆ ಒಳ್ಳೆ ದಿನ ಬರುತ್ತವೆ ಎಂದೆ ಕನಸು ಕಂಡರು."ಕುಮಾರ ಪರ್ವತ ಚಾರಣ ಪುರಾಣಂ" ಲೇಖನ "ಪ್ರಜಾವಾಣಿ"ಯಲ್ಲಿ ಪ್ರಕಟವಾಯಿತು. ಜನಮನ್ನಣೆ ಗಳಿಸಿತು.ಹೀಗೆ ರಾಯರು ಕವಿ,ಲೇಖಕ ,ಫೋಟೋಗ್ರಾಫರ್ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಅದ ಒಂದು ಹೊಸ ಛಾಪನ್ನು ಮೂಡಿಸಿದರು.
ರಾಯರು ಎಂದೂ ಮರೆಯದ ಒಬ್ಬ ಗೆಳೆಯನೆಂದರೆ ಅದು "ವಿಜಯ್".ವಿಜಯ್ ರಾಯರ ಜೊತೆಗೆ ಪಿ ಯು ಸಿ ಓದಿದವನು. ಪಿ ಯು ಸಿ ಯಲ್ಲಿ ನಾಚಿಕೆಯ ಮುದ್ದೆಯಂತಿದ್ದ "ವಿಜಯ್" ಡಿಗ್ರೀಯಲ್ಲಾದ ಬದಲಾವಣೆ ರಾಯರಿಗೆ ಇಂದಿಗೂ ಕಲ್ಪಿಸಲು ಆಗುವುದಿಲ್ಲ.ಅದು ಎಲ್ಲಿಂದ ಹಿಡಿಯಿತೋ ಗೊತ್ತಿಲ್ಲ ಚೆಸ್ಸ್ ಆಡುವ ಹುಚ್ಚು, ಕ್ಲಾಸಿಗೆ ಅಟೆಂಡ್ ಆಗುವುದೇ ಬಿಟ್ಟು ಬಿಟ್ಟಿದ್ದ.ಮೊದಲ ವರ್ಷ ೪೫೦೦ ರೂ ದಂಡ ತೆತ್ತು ಹೇಗೋ ಪರೀಕ್ಷೆಗೆ ಕೂತಿದ್ದ.೨ನೆ ವರ್ಷದಲ್ಲಿರಬೇಕಾದರೆ ಒಮ್ಮೆ ರಾಯರು ಕೇಳಿದ್ದರು,ನೀನು ಹೀಗೆ ಮಾಡಿದರೆ ಮುಂದೆ ಜೀವನಕ್ಕೆ ಏನು ಮಾಡುವಿ ಎಂದು?ಆಗ "ವಿಜಯ್"ದು ಸರಳ ಉತ್ತರ "ಚೆಸ್ಸ್"ಕೋಟಾದಡಿ
ಬ್ಯಾಂಕ್ ಗೆ ಕೆಲಸಕ್ಕೆ ಸೇರುವುದು.ಮತ್ತೆ ಹೀಗೆ ಮ್ಯಾಚ್ ಇದೆ ಎಂದು ಹೇಳಿ ಊರು ಸುತ್ತುವುದು.ವಾರಕ್ಕೆ ಒಂದೋ ಎರಡೋ ದಿನ ಕೆಲಸಕ್ಕೆ ಹೋಗುವುದು ಎಂದಿದ್ದ.ಹೀಗೆ ಜೀವನದ ಕಟು ಸತ್ಯದ ಕಲ್ಪನೆಯೇ ಇಲ್ಲದ ಒಬ್ಬ ವ್ಯಕ್ತಿಯಾಗಿ ತನ್ನದೇ ಪ್ರಪಂಚದಲ್ಲಿ ಸುತ್ತುತ್ತಿದ್ದ
ವಿಜಯ್ ಗೆ ರಾಯರ ಬುದ್ದಿಮಾತು ರುಚಿಸಲಿಲ್ಲ.ರಾಯರು ತನ್ನಿಂದ ಆದಷ್ಟು ಹೇಳಿ ನೋಡಿದರು.ಏನೇನು ಪ್ರಯೋಜನವಾಗಲಿಲ್ಲ.ಕೊನೆಗೆ ರಾಯರು ಹೇಳುವುದನ್ನೇ ಬಿಟ್ಟರು.
ರಾಯರ ಮತ್ತಿಬ್ಬರು ಸ್ನೇಹಿತರೆಂದರೆ ಕಾರ್ತಿಕ್ ಮತ್ತು ಪ್ರಸಾದ.ಅವರಿಗಾದ ಅನ್ಯಾಯ ನೆನೆಸಿದರೆ ರಾಯರಿಗೆ ಇಂದಿಗೂ ಮೈಯುರಿಯುತ್ತದೆ.ರಾಯರಿಗೆ ಬರುತ್ತಿದ್ದ ಒಬ್ಬರು ಲೆಕ್ಚುರ್ ಮೇಲೆ ಒಳ್ಳೆ ಅಭಿಮಾನವಿತ್ತು.ಪಾಠ ಚೆನ್ನಾಗಿ ಮಾಡುತ್ತಿದ್ದರು.ಆದರೆ ಅವರು ದಿನ ಕ್ಲಾಸ್ಸಲ್ಲಿ ಬೇರೆ ಲೆಕ್ಚುರ್ ರನ್ನು ತಮಾಷೆ ಮಾಡುವುದು ಹೀಗೆಲ್ಲ ಮಾಡಿ ತರಗತಿ ಬೋರ್ ಆಗದ ಹಾಗೆ ನೋಡಿಕೊಳ್ಳುತ್ತಿದ್ದರು.ಆದರೆ ದಿನ ಕಳೆದಂತೆ ಇದೆ ಕೇಳಿ ಕೇಳಿ ಬೋರ್ ಅನಿಸತೊಡಗಿತು.ಇವರ ಸಹಪಾಠಿಗಳ ಆನ್ಸರ್ ಶೀಟ್ ಕಳೆದು ಹಾಕಿ ಕೊನೆಗೆ ಇಂಟರ್ನಲ್ ಮಾರ್ಕ್ಸ್ ಕೊಡದೆ ತುಂಬ ಸಥಾಯಿಸಿದ್ದರು.ಹೀಗೆಲ್ಲ ಮಾಡಿ ಲೆಕ್ಚೆರ್ ತಮ್ಮ
ಸ್ಥಾನದ ಗೌರವ ತಾವೇ ಹಾಳು ಮಾಡಿದ್ದರು.ಇವೆಲ್ಲ ರಾಯರಿಗೆ ಮರೆಯಲಾಗದ ಘಟನೆಗಳು.
ರಾಯರು ಎಲ್ಲ ವರ್ಷದಲ್ಲಿಯೂ "ವಿಶಿಷ್ಟ ದರ್ಜೆ"ಯಲ್ಲಿಯೇ ಉತ್ತೀರ್ಣರಾಗಿದ್ದರು.ಮುಂದೆ "ಎಂ ಎಸ್ ಸಿ" ಮಾಡುವ ಗುರಿ ಹೊಂದಿದ್ದರು.ಎಲ್ಲವು ಅಂದು ಕೊಂಡಂತೆ ನಡೆದರೆ ಮುಂದೆ ಕೊಣಾಜೆಯಲ್ಲಿ "ಎಂ ಎಸ್ ಸಿ ".ಅಂದು ಮಂಗಳವಾರ ಮತ್ತೆ ಬ್ರಹ್ಮರಾಯರು ಬಂದರು.ಈ ಸಲ ಇನ್ನು ಅದಾವ ಬೇಡಿಕೆ ಇರುತ್ತೋ ಏನೋ ಎಂದು ರಾಯರ ಹೃದಯ ಜೋರಾಗಿ ಬಡಿಯತೊಡಗಿತು.
ಮುಂದುವರೆಯುವುದು......