Thursday, February 11, 2010

ಹೋರಾಟದ ಹಾದಿ



ಮದುವೆ,ಗ್ರಹಪ್ರವೇಶ ಎಲ್ಲ ಅದ್ದೂರಿಯಾಗಿ ನಡೆಯಿತು.ಬಂದ ನೆಂಟರಿಷ್ಟರು,ಬಂಧುಗಳು ಒಬ್ಬೊಬ್ಬರಾಗಿ ಚದುರತೊಡಗಿದರು. ರಾಯರ ಮನದಿಂದಲೂ ಹಿಂದೆ ನಡೆದ ಕಹಿ ಘಟನೆಗಳು,ಮಾಯವಾಗತೊದಗಿದವು.ಹೊಸ ಹೊಸ ಭಾವನೆಗಳಿಗೆ,ಕನಸಿಗೆ ಪ್ರೇರಣೆಯಾಗಿ ಈಗ ಸಂಧ್ಯಾ ಜೊತೆಗಿದ್ದಳು.ಸುಮಾರು ೧೫ ದಿನ ಊರಲ್ಲಿ ಇದ್ದು ಸಮ್ಮಾನ,ನೆಂಟರಿಷ್ಟರ ಮನೆಗೆ ಹೋಗಿ ಬಂದರು.ಬ್ರಹ್ಮರಾಯರಂತು ಈಗ ತುಂಬಾ ನಿರಾಳರಾದವರಂತೆ ಕಂಡು ಬಂದರು.ಅವರ ಮುಖದಲ್ಲಿ ಏನೋ ಒಂದು ಮಂದಹಾಸ ಎದ್ದು ಕಾಣಿಸುತ್ತಿತ್ತು.ರಾಯರ ತಾಯಿಯಂತೂ ತನಗೆ ಒಬ್ಬಳು ಮಗಳಿದ್ದರೆ ಹೇಗೆ ನೋಡುತ್ತಿದ್ದರೋ ಅದಕ್ಕಿಂತ ಹೆಚ್ಚಿನ ಪ್ರೀತಿ ಸೊಸೆಯ ಮೇಲೆ ತೋರಿದರು.

ರಾಯರ ಜೊತೆಯಲ್ಲಿಯೇ ಅವರ ಮಿತ್ರ ಪ್ರಸನ್ನರಿಗೂ ಕೂಡ ಮದುವೆಯಾಯಿತು.ರಾಯರದು ಜೂನ್ ೨೨ಕ್ಕೆ ನಡೆದರೆ ಪ್ರಸನ್ನರದು ಜೂನ್ ೩೦ಕ್ಕೆ ಒಂದೇ ವಾರ ಅಂತರ,ಮರುವಾರದಲ್ಲಿಯೇ ಇನ್ನೊಬ್ಬರು ಮಿತ್ರ ಪ್ರಸಾದರಿಗೆ ಮದುವೆ.ಹೀಗೆ ಎಲ್ಲ ಮಿತ್ರರು ಸುಮಾರು ೧ ತಿಂಗಳು ಕಂಪೆನಿಗೆ ರಜೆ ಹಾಕಿದ್ದರು.

ಸಂಧ್ಯಾ ಳಿಗೆ ಮಾತು ಬಹಳ ಕಡಿಮೆ.ಅವಳು ಯಾವತ್ತೂ ಇನ್ನೊಬ್ಬರ ಬಗ್ಗೆ ಮಾತಾಡುತ್ತಿರಲಿಲ್ಲ.ಅವರು ಹಾಗೆ,ಇವರು ಹೀಗೆ ಎಂದು ಎಂದೂ ದೂರಿದ್ದಿಲ್ಲ,ಅವರಿವರ ಬಗ್ಗೆ ಮಾತಾಡಿ ಏನಾಗಬೇಕು ಎಂಬುದು ಅವಳ ಅಭಿಮತ.ಸಾಮಾನ್ಯವಾಗಿ ಮನುಷ್ಯರು ಅವರಿವರ ಬಗ್ಗೆ ಮಾತಾಡಿಯೇ ತಮ್ಮ ಆಯುಷ್ಯ ಕಳೆಯುತ್ತಾರೆ.ಇನ್ನೊಬ್ಬರ ಬಗ್ಗೆ ಮಾತಾಡದಿದ್ದರೆ ಮಾತುಗಳು ಎಷ್ಟು ಕಡಿಮೆಯಾಗುತ್ತವೆ ಎಂದು ರಾಯರು ಅರಿತರು.ರಾಯರಿಗೆ ಹೇಳಿ ಮಾಡಿಸಿದ ಜೋಡಿ.

ರಾಯರು ತಮ್ಮ ಪತ್ನಿಯ ಜೊತೆಗೆ ಬೆಂಗಳೂರಿಗೆ ಬಂದರು.ಸಂದ್ಯಳು ರಾಯರಂತೆ "ಬಿ ಎಸ್ ಸಿ", "ಎಂ ಎಸ್ ಸಿ" ಮಾಡಿದ್ದರು.ಆದರೆ ಅವರದು ಸಾಫ್ಟ್ ವೇರ್ ಕ್ಷೇತ್ರ,ರಾಯರದು ಹಾರ್ಡ್ ವೇರ್.ಸಂಧ್ಯಾಳಿಗೆ ಹೊರಗೆ ಕೆಲಸಕ್ಕೆ ಹೋಗಲು ಭಾರಿ ಆಸಕ್ತಿ ಏನು ಇರಲಿಲ್ಲ.ರಾಯರು ಒತ್ತಾಯ ಮಾಡಲಿಲ್ಲ.ಆದರೆ ಆಕೆ ಸದಾ ಚಟುವಟಿಕೆಯಲ್ಲೇ ಇರುವವಳು,ಮನೆಯಲ್ಲಿಯೇ ಕೂತು ಪ್ರಾಜೆಕ್ಟ್ ಮಾಡುತ್ತಿದ್ದರು.ರಾಯರ ಬಹುಕಾಲದ ಕನಸು ಸ್ವಂತ "ವೆಬ್ ಸೈಟ್ " ಮಾಡಬೇಕೆಂಬುದು ನನಸಾಯಿತು.ರಾಯರ ಅಸೆ,ಕನಸಿಗೆ ಅನುಗುಣವಾಗಿ ಸಂಧ್ಯಾ "ವೆಬ್ ಸೈಟ್" ರಚಿಸಿದಳು.

ಸಂಧ್ಯಾ ಳಿಗೆ ದೇವರ ಮೇಲೆ ಅಪಾರ ನಂಬಿಕೆ.ಜಾತಕ,ಜ್ಯೋತಿಷ್ಯದ ಮೇಲೆ ಬಹು ವಿಶ್ವಾಸ.ರಾಯರು ಎಲ್ಲದರಿಂದಲೂ ಸಮ ದೂರದಲ್ಲಿದ್ದರು.ಸಂಧ್ಯಾಲಂತೂ ರಾಯರನ್ನು ಬೆಳಗ್ಗೆಯೇ ಎದ್ದು ದೇವಸ್ತಾನಕ್ಕೆ ಹೋಗಿ ಬರುವಂತೆ ಒತ್ತಾಯಿಸುತ್ತಿದ್ದರು. ರಾಯರು ಯಾವತ್ತು ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುತ್ತಿರಲಿಲ್ಲ.ನನ್ನ ಕೈ ಹಿಡಿದು ಬಂದಿದ್ದಾಳೆ,ಅವಳ ಮನಸ್ಸಿಗೆ ನೋವಾಗದಂತೆ ಎಷ್ಟು ನಡೆಯಲು ಸಾಧ್ಯವೋ ಅಷ್ಟನ್ನು ಮಾಡುವುದು ತಪ್ಪಲ್ಲ ಎಂದು ನಂಬಿದ್ದರು.ಹಾಗಾಗಿ ರಾಯರ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಯಿತು,ಈಗ ರಾಯರು ಬೆಳಗ್ಗೆ ಬೇಗ ಎದ್ದು ದೇವಸ್ತಾನಕ್ಕೆ ಹೋಗುತ್ತಿದ್ದರು.ಯಾವುದು ಒಳ್ಳೆಯದೋ, ಅದರಿಂದ ಕೆಡುಕು ಇಲ್ಲವೋ ಅದನ್ನು ತಾನು ಪಾಲಿಸುವುದರಿಂದ ಏನು ತೊಂದರೆ ಇಲ್ಲ ಮತ್ತು ಅದರಿಂದ ಇನ್ನೊಬ್ಬರಿಗೆ ಸಂತಸ,ನೆಮ್ಮದಿ ದೊರೆಯುವುದಾದರೆ ಅದಕ್ಕೆ ನಾನೇಕೆ ಅಡ್ಡಿ ಪಡಿಸಲಿ ಎಂಬಂತಿದ್ದರು ರಾಯರು.ರಾಯರು ಅಲ್ಲೇ ಮನೆಯ ಪಕ್ಕದಲ್ಲಿಯೇ ಇದ್ದ ಅನಂತಕೃಷ್ಣ ಭಟ್ಟರಲ್ಲಿ ತಾವು ಬಾಲ್ಯದಲ್ಲಿ ಕಲಿತು ಮರೆತಿದ್ದ ಸಂಧ್ಯಾವಂದನೆಯನ್ನು ಪುನಃ ಕಲಿತರು.ಜೊತೆಗೆ ನಿತ್ಯ ಪೂಜೆ ಮಾಡುವ ವಿಧಾನ,ರುಧ್ರವನ್ನು ತಮ್ಮ ೩೦ನೆಯ ವಯಸ್ಸಲ್ಲಿ ಕಲಿತರು.ಕಲಿಕೆಗೆ ಬೇಕಾದ್ದು ಶ್ರದ್ದೆ,ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ತೋರಿಸಿ ಕೊಟ್ಟರು.ಹೀಗೆ ರಾಯರು ದೇವರಿಗೆ ಹತ್ತಿರವಾಗತೊಡಗಿದರು.ಮನೆಯಲ್ಲಿ ಸಂಧ್ಯಾ ವಂದನೆ,ನಿತ್ಯ ಪೂಜೆ ಪ್ರಾರಂಭವಾಯಿತು.ಹೀಗೆ ೩ ತಿಂಗಳು ಕಳೆಯಿತು.

ರಾಯರ ೩ ವರ್ಷದ ಬಾಂಡ್ ಮುಗಿಯುತ್ತ ಬಂತು.ರಾಯರು ಈಗ ಇರುವ ಕಂಪೆನಿ ಬಿಡುವ ತೀರ್ಮಾನ ಕೈಗೊಂಡಿದ್ದರು.ಬೇರೆ ಕಂಪೆನಿಗಳಿಗೆ ಅರ್ಜಿ ಹಾಕಿದರು."ದ ನ್ಯಾಷನಲ್ ಇನ್ಸ್ಟ್ರುಮೆಂಟ್" ಕಂಪೆನಿಯ ಇಂಟರ್ವ್ಯೂಗೆ ಸೆಲೆಕ್ಟ್ ಆದರು."ಚಿಪ್ ಡಿಸೈನ್" ಕ್ಷೇತ್ರದಲ್ಲಿದ್ದ ಅನುಭವ,ಹೊಸ ಹೊಸ ಐಡಿಯಾ ಇವು ಒಂದು ಕ್ಷಣ ಇಂಟರ್ವ್ಯೂ ನಡೆಸುತ್ತಿದ್ದವರನ್ನೇ ದಿಗ್ಭ್ರಮೆಗೊಳಿಸಿತು.ರಾಯರನ್ನು ನೇರವಾಗಿ "ರಿಸರ್ಚ್ ಅಂಡ್ ಡೆವಲಪ್ಮೆಂಟ್" ವಿಭಾಗಕ್ಕೆ ಆರಿಸಿದರು.ಹೊಸ ಕೆಲಸ "ಯು ಎಸ್ ಎ"ಯಲ್ಲಿ.

ರಾಯರ ಅಮ್ಮನಂತೂ ಸಂತಸದಿಂದ ಕುಣಿದು ಕುಪ್ಪಳಿಸಿದರು.ಕೊನೆಗೂ ಮಗನಿಗೆ ದೊಡ್ಡ ಕೆಲಸವಾಯಿತಲ್ಲ.ಅವನ ಸಾಧನೆಗೆ ತಕ್ಕ ಮನ್ನಣೆ ಸಿಕ್ಕಿತಲ್ಲ ಎಂದು ಸಂತಸ ಪಟ್ಟರು.ದೇವರು ಇದ್ದಾನೆ ಎಂಬುದು ಸುಳ್ಳಲ್ಲ,ಇಂದಲ್ಲ ನಾಳೆ ಒಳ್ಳೆಯದಾಗುತ್ತದೆ ನಮ್ಮ ದಿನ ಬರುವವರೆಗೆ ನಾವು ಕಾಯಬೇಕು ಎಂಬ ಸತ್ಯ ಮನಗಂಡರು.ಬ್ರಹ್ಮರಾಯರು ಇಲ್ಲೇ ಭಾರತದಲ್ಲೇ ಎಲ್ಲಿಯಾದರೂ ನೋಡಬಹುದಿತ್ತು ಎಂದು ತಮ್ಮಷ್ಟಕ್ಕೆ ತಾವೇ ಅಂದು ಕೊಂಡರು.

ಸಂದ್ಯಾಲಂತೂ ರಾಯರು ಇಂಟರ್ವ್ಯೂ ಗೆ ಹೋಗುವಾಗಲೇ ಎಲ್ಲ ಭಾರವನ್ನು ದೇವರ ಮೇಲೆ ಹೊರಿಸಿದ್ದರು.ಅವಳ ನಂಬಿಕೆ ಹುಸಿಯಾಗಲಿಲ್ಲ.ಎಲ್ಲೆಡೆಯಿಂದ ಅಭಿನಂದನೆ,ಮೆಚ್ಚುಗೆಯ ಪತ್ರಗಳು,ಫೋನ್ ಕಾಲ್ ಗಳು ಬಂದವು.ರಾಯರ ಕನಸು ನನಸಾಗಿತ್ತು,ಯಾವುದೇ "ಚಿಪ್ ಡಿಸೈನ್ ಇಂಜಿನಿಯರ್"ನ ಮಹೋನ್ನತ ಕನಸು "ರಿಸರ್ಚ್ ಅಂಡ್ ಡೆವಲಪ್ಮೆಂಟ್" ಕ್ಷೇತ್ರ,ನೇರವಾಗಿ ಅಲ್ಲಿಗೆ ಆಯ್ಕೆಯಾದದ್ದು ರಾಯರಿಗೆ ಬಹಳ ಆನಂದ ತಂದಿತ್ತು. ಕಳೆದ ೩ ತಿಂಗಳುಗಳಲ್ಲಿ ಆಫೀಸಿನಲ್ಲಿ ಆದ ಬದಲಾವಣೆ,ಈಗ ಇನ್ನೂ ಒಳ್ಳೆಯ ಹೊಸ ಕೆಲಸ ಸಿಕ್ಕಿದ್ದು,ಮನಸ್ಸಿಗೆ ಸಾಕಷ್ಟು ನೆಮ್ಮದಿ ನೀಡಿತ್ತು.

ರಾಯರು ಮುಂದಿನ ಸುಮಾರು ೫ ವರ್ಷಗಳ ಕಾಲ "ಯು ಎಸ್ ಎ "ಯಲ್ಲಿ ಕೆಲಸ ಮಾಡಿದರು."ರಿಸರ್ಚ್ ಅಂಡ್ ಡೆವಲಪ್ಮೆಂಟ್" ಕ್ಷೇತ್ರದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ,ರಾಯರು ತಮ್ಮ ಎಲ್ಲ ಶ್ರಮ,ಏಕಾಗ್ರತೆಯಿಂದ ಕೆಲಸ ಮಾಡಿ,ಎಲ್ಲ ಅಡೆ ತಡೆಗಳನ್ನೂ ದಾಟಿ ಬಂದರು.ಹೊಸತನ್ನು ಕೊಟ್ಟರು,ಹಳೆಯದರಲ್ಲಿರುವ ಲೋಪ ಧೋಷಗಳನ್ನು ಸರಿಪಡಿಸಿದರು.

ಸಂಧ್ಯಾ ರಾಯರ ಬಾಳಲ್ಲಿ ಬೆಳಕಾಗಿ "ಪ್ರೀತಿ" ಬಂದಳು."ಅರ್ಜುನ್"ಗೆ ೬ ತಿಂಗಳು ಆಗಿದ್ದಾಗ ರಾಯರು "ಯು ಎಸ್ ಎ" ಬಿಟ್ಟು ಮತ್ತೆ ಬೆಂಗಳೂರಿಗೆ ಬಂದರು.ರಾಯರು ಬೆಂಗಳೂರಿನಲ್ಲಿ ಚೀಫ್ ಆರ್ಕಿಟೆಕ್ ಆಗಿ ನೇಮಕವಾದರು.

ಇತ್ತ ರಾಯರು ವಿಧ್ಯಾಗಿರಿಯಲ್ಲಿ ತಮ್ಮ ಜಾಗಕ್ಕೆ ಹತ್ತಿರದಲ್ಲಿಯೇ ಇದ್ದ ದೇಜಪ್ಪ ಶೆಟ್ರ ೭ ಎಕರೆ ಜಾಗ ಮಾಡಿಕೊಂಡರು.೨ ಎಕರೆ ಅಡಿಕೆ,ತೆಂಗಿನ ತೋಟವಿತ್ತು.ಇನ್ನು ೨ ಎಕರೆ ಗದ್ದೆ ಉಳಿದ ೩ ಎಕರೆ ಬೋಳು ಗುಡ್ಡ.ರಾಯರಿಗೆ ಬಾಲ್ಯದಲ್ಲಿಯೇ ಕೃಷಿಯ ಮೇಲೆ ಪ್ರೀತಿ ಇತ್ತು.ಅವರ ಕೃಷಿ ಪ್ರೀತಿಗೆ ಮತ್ತಷ್ಟು ಪುಷ್ಟಿ ದೊರೆತಿದ್ದು ಅವರು ಪ್ರೌಢಶಾಲೆಗೆ ಬಂದ ಮೇಲೆ,ಅವರ ಮುಖ್ಯೋಪಾಧ್ಯಾಯರಾದ "ಅಚ್ಯುತ ಭಟ್ಟರು" ಶಾಲೆಯ ಆವರಣದಲ್ಲಿದ್ದ ಖಾಲಿ ಜಾಗದಲ್ಲಿ ಹೂದೋಟ,ಶಾಲೆಯ ಹಿಂಭಾಗದಲ್ಲಿದ್ದ ಜಾಗದಲ್ಲಿ ಅಡಿಕೆ ಮರ,ತೆಂಗು ನೆಟ್ಟು ಬೆಳೆಸಿದ್ದರು.ಅದನ್ನು ಪೋಷಿಸಿದ್ದರು.ಅವರ ಕಾಳಜಿಯಿಂದಾಗಿಯೇ ಅಡಿಕೆ,ತೆಂಗಿನ ಸಸಿ,ಮರವಾಯಿತು.ಫಲ ಕೊಡಲು ಪ್ರಾರಂಭಿಸಿತು.ತಾವು ಅಲ್ಲಿರುವಷ್ಟು ದಿನವು ದಿನ ಬೆಳಗ್ಗೆಯೇ ಬಂದು ಡ್ರಿಪ್ ನೀರೆಲ್ಲ ಬಿಟ್ಟು ಎಲ್ಲ ಕಡೆ ಒಂದು ರೌಂಡ್ ಹೊಡೆದು ಹೋಗುತ್ತಿದ್ದರು.ಆಮೇಲೆ ಹಗಲು ಪಾಠ,ಶಾಲೆಯ ಕೆಲಸಗಳು ಇರುತ್ತಿದ್ದವು.ಎಲ್ಲ ಮುಗಿಸಿ ಸಂಜೆ ಇನ್ನೊಮ್ಮೆ ಹೋಗಿ ಸುತ್ತಾಡಿ ನೀರು ಎಲ್ಲ ಹಾಕಿ ಕಾಲ ಕಾಲಕ್ಕೆ ಅದಕ್ಕೆ ಬೇಕಾದ ಸೊಪ್ಪು,ಗೊಬ್ಬರ ಎಲ್ಲ ಸಿಗುವಂತೆ ವ್ಯವಸ್ತೆ ಮಾಡಿದ್ದರು.ತುಂಬಾ ಸರಳ ಸ್ವಭಾವದವರಾಗಿದ್ದ ಅವರು ಮುಖ್ಯೋಪಾಧ್ಯಾಯರಾಗಿದ್ದ ಅವಧಿಯಲ್ಲಿ ಶಾಲೆ ಎಲ್ಲ ವಿಧದಲ್ಲಿಯೂ,ಎಲ್ಲ ವಿಭಾಗದಲ್ಲಿಯೂ ಸಾಕಷ್ಟು ಅಭಿವೃದ್ದಿ ಹೊಂದಿತು.ಕೃಷಿ ಕ್ಷೇತ್ರದಲ್ಲಿ ಅವರಿಗಿದ್ದ ಪ್ರೀತಿ,ಅವರ ಕಾರ್ಯ ವಿಧಾನ ರಾಯರ ಮೇಲೆ ಬಹಳ ಪ್ರಭಾವ ಬೀರಿದ್ದವು.ಆದರೆ ಈಗ ಇರುವ ಜಾಗ ಅಸ್ತಿಯಲ್ಲಿ ಬಹಳ ಅಭಿವೃದ್ದಿ ಮಾಡುವುದು ಅಸಾಧ್ಯ ಎಂದು ರಾಯರು ಅಂದು ನಿರ್ಧರಿಸಿದ್ದರು.ಎಲ್ಲದರ ಫಲವೇ ಈಗಿನ ೭ ಎಕರೆ ಜಮೀನು ಖರೀದಿ.

ರಾಯರು "ಎಂ ಎಸ್ ಸಿ" ಓದುತ್ತಿದ್ದಾಗ ಇನ್ನೊಬ್ಬರು ರಾಯರ ಮೇಲೆ ಬಹಳ ಪ್ರಭಾವ ಬೀರಿದವರು ಅವರ ಅಣ್ಣ ಶ್ಯಾಮ ಭಟ್.ಶ್ಯಾಮ ಭಟ್ ಸರಕಾರಿ ಹುದ್ದೆಯಲ್ಲಿದ್ದರು.ಆದರೆ ೪೦ನೆಯ ವಯಸ್ಸಿನಲ್ಲಿಯೇ ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಯಲ್ಲಿ ಇರುವ ಸಣ್ಣ ಜಮೀನಿನಲ್ಲಿ ಕೃಷಿ ಮಾಡಿದ್ದರು.ತಾವು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲಿದ್ದ ಭ್ರಷ್ಟಾಚಾರ,ಲಂಚ,ಮೋಸ,ವಂಚನೆ,ಎಲ್ಲೂ ಸಿಗದ ಪ್ರೋತ್ಸಾಹ ಇವೆಲ್ಲವೂ ಅವರು ರಾಜೀನಾಮೆ ಕೊಡುವಂತೆ ಮಾಡಿತ್ತೋ ಅಥವಾ ಅಲ್ಲಿರುವವರೇ ಮೋಸ ಮಾಡಿ ಇವರು ನಿವ್ರತ್ತಿ ತೆಗೆದುಕೊಳ್ಳುವ ಹಾಗೆ ಮಾಡಿದರೋ ಎಂಬುದು ಇನ್ನು ನಿಘೂಡ.ಅಲ್ಲಿಯವರೆಗೂ ಅವರು ಮನೆಯ ಎಲ್ಲ ಜವಾಬ್ದಾರಿ ವಹಿಸಿಕೊಂಡು ಬಂದಿದ್ದರು.ತಮ್ಮಂದಿರ ವಿಧ್ಯಾಭ್ಯಾಸ,ಮನೆ,ಇರುವ ಸಣ್ಣ ತೋಟದ ದುಡ್ಡು ಎಲ್ಲಿಗೂ ಸಾಲುತ್ತಿರಲಿಲ್ಲ.ಆದರೆ ಶ್ಯಾಮಣ್ಣ ತಮ್ಮ ಎಲ್ಲ ದುಡ್ಡನ್ನು ಮನೆಗೆ,ಕುಟುಂಬದ ಅಭಿವೃದ್ದಿಗೆ ವಿನಿಯೋಗಿಸಿದ್ದರು.ತಮಗಾಗಿ ಏನನ್ನು ಇಟ್ಟಿರಲಿಲ್ಲ.ತನ್ನದು ಎಂದು ಶ್ಯಾಮಣ್ಣನ ಬಳಿಯಿದ್ದುದು ಹಳೆಯ ಜೀಪ್ ಮಾತ್ರ.ತನ್ನ ತಮ್ಮಂದಿರು,ಕುಟುಂಬ ಎಲ್ಲರ ಸಂತೋಷವೇ ತಮ್ಮ ಸಂತೋಷ ಎಂದು ನಂಬಿದ್ದರು ಮತ್ತು ಹಾಗೆಯೆ ಬಾಳಿದರು.ಇದ್ದ ಒಬ್ಬನೇ ಮಗನನ್ನು ವೇದಪಾಠಕ್ಕೆ ಕಳಿಸಿದ್ದರು.

ಮನೆಯಲ್ಲಿ ನಿಂತ ಮೇಲೆ ಶ್ಯಾಮಣ್ಣ ಸುಮ್ಮನೆ ಕೂರಲಿಲ್ಲ.ಪಕ್ಕ ಕೃಷಿಕರಾಗಿ ಹೋದರು.ಎಲ್ಲ ಕೆಲಸವನ್ನು ಕಲಿತರು.ಅಂದು ಸಂಜೆ ರಾಯರು ಶ್ಯಾಮಣ್ಣನ ಮನೆಗೆ ಹೋಗಿದ್ದರು.ಶ್ಯಾಮಣ್ಣ ಕೆಲಸದವರ ಜೊತೆಗೆ ಸೇರಿ ತಾವು ಕೆಲಸ ಮಾಡುತ್ತಿದ್ದರು.ಚಾ ಕುಡಿಯಲು ಎಂದು ಶ್ಯಾಮಣ್ಣ ಬಂದಾಗಲೇ ರಾಯರು ಅವರನ್ನು ನೋಡಿದ್ದು,ಮೊದಲ ಸಲ ಹಾರೆ,ಗುದ್ದಲಿ ಹಿಡಿದಿದ್ದರು.ಇಲ್ಲಿಯವರೆಗೂ ಕೆಲಸ ಮಾಡಿಸಿ ಅಷ್ಟೇ ಗೊತ್ತಿದ್ದ ಶ್ಯಾಮಣ್ಣ ಇಂದು ತಾವೇ ಕೆಲಸಕ್ಕೆ ಇಳಿದಿದ್ದರು.ಕೈಯಲ್ಲೆಲ್ಲ ಬೊಬ್ಬೆ ಎದ್ದಿದ್ದವು.ಬಿಸಿ ಬಿಸಿ ಚಾ ಗ್ಲಾಸ್ ಹಿಡಿಯಲು ಆಗುತ್ತಿರಲಿಲ್ಲ.ಅವರು ಕಷ್ಟಪಟ್ಟು ಕುಡಿಯುತ್ತಿದ್ದರು.ಇವೆಲ್ಲ ನೋಡಿ ರಾಯರಿಗೆ ಕರುಳು ಚುರ್ ಎಂದಿತು.ಅತ್ತಿಗೆಯ ಮುಖ ನೋಡಿದಾಗಲಂತೂ ದುಖ: ಉಮ್ಮಳಿಸಿ ಬಂತು.ಆದರೆ ಶ್ಯಾಮಣ್ಣ ಮಾತ್ರ ಎಂದಿನಂತೆ ಏನೂ ನಡೆದಿಲ್ಲ ಎಂಬಂತಿದ್ದರು.ಅಲ್ಲಿಂದ ಮುಂದೆ ೨,೩ ತಿಂಗಳಲ್ಲಿ ಶ್ಯಾಮಣ್ಣ ಅವರು ಕೃಷಿ ಕಾರ್ಯದಲ್ಲಿ ಎಷ್ಟು ಪಳಗಿದ್ದರು ಎಂದರೆ ಅವರು ಅಷ್ಟು ಸಮಯ ಉದ್ಯೋಗದಲ್ಲಿದ್ದರು ಎಂದರೆ ಯಾರು ನಂಬದ ಸ್ತಿತಿ ಬಂತು.ಶ್ಯಾಮಣ್ಣ ಬಾಲ್ಯದಲ್ಲಿ ತೋಟದ ಕೆಲಸ ಎಲ್ಲ ಮಾಡುತ್ತಿದ್ದರು,ಆಮೇಲೆ ಉದ್ಯೋಗವಾದ ಮೇಲೆ ಮಾಡಿಸುತ್ತಿದ್ದರು,ಈಗ ಮತ್ತೆ ಮೊದಲಿನಂತೆ ಮಾಡುತ್ತಿದ್ದಾರೆ.ನಿಜವಾಗಿಯೂ "ಗ್ರೇಟ್ ",ಮುಂದೆ ಒಂದೆರಡು ವರ್ಷಗಳಲ್ಲಿ ಫಸಲು ಎಲ್ಲ ಹೆಚ್ಚಾದವು,ಸೋರಿಕೆ ಕಳ್ಳತನ ನಿಂತಿತು.ಅಲ್ಲಲ್ಲಿ ಇಂಗು ಗುಂಡಿಗಳು ತಲೆ ಎತ್ತಿದವು.ಶ್ಯಾಮಣ್ಣ ಮಾಡಿದ ಒಂದೊಂದು ಕೆಲಸದಿಂದಲೂ ನೆರೆ ಹೊರೆಯವರಿಗೆ ತುಂಬಾ ಉಪಕಾರವಾಗುತ್ತಿತ್ತು.ಅವರು ಹಿಂದೆ ಉದ್ಯೋಗದಲ್ಲಿದ್ದಾಗ ತೆಗೆದ ಜೀಪ್ ಅಲ್ಲಿ ಸುತ್ತ ಮುತ್ತ ನಡೆದ ಎಷ್ಟೋ ಮದುವೆಗಳಿಗೆ,ಶುಭ ಕಾರ್ಯಗಳಿಗೆ ಸಾಕ್ಷಿಯಾಗಿತ್ತು,ತಮ್ಮ ಕೈಯಲ್ಲಿ ದುಡ್ಡು ಇರುವವರೆಗೂ ಅದನ್ನು ಪರರ ಉಪಯೋಗಕ್ಕಾಗಿಯೇ ವಿನಿಯೋಗಿಸಿದರು.ಅದಕ್ಕೆ ಸುತ್ತಮುತ್ತ ಎಲ್ಲ ಶ್ಯಾಮಣ್ಣ ಎಂದರೆ ಇಂದಿಗೂ ಆ ಗೌರವ ಭಾವನೆ,ಪ್ರೀತಿ ಅದರ.

ಆದರೆ ಶ್ಯಾಮಣ್ಣನ ಕಷ್ಟದ ದಿನಗಳಲ್ಲಿ ಅವರ ಮನಕ್ಕೆ ಎಷ್ಟು ಜನ ಸಾಂತ್ವನ ಹೇಳಿದರು,ಎಷ್ಟು ಜನ ಬೆಂಬಲಕ್ಕೆ ನಿಂತರು ಎಂದು ಯೋಚಿಸುತ್ತ ಹೋದಂತೆ ರಾಯರಿಗೆ ಕಾಣಿಸಿದ್ದು ಬರಿ ಕತ್ತಲು,ಎಂದು ಎಲ್ಲರಿಗೆ ಕೈಯೆತ್ತಿ ಕೊಡುತ್ತಿದ್ದ ಕೈಯದು ಎಂದೂ ಕೈ ಚಾಚಲಿಲ್ಲ,ಸ್ವಾಭಿಮಾನವೇ ಉಸಿರು ಆ ಜೀವಕ್ಕೆ.ನಡೆದ ಪ್ರತಿಯೊಂದು ಘಟನೆಗಳು ರಾಯರಿಗೆ ನಮ್ಮ ನಡುವಿನ ಬಂಧ ಗಟ್ಟಿ ಸಾಲದು,ನಮ್ಮದು ಬರಿ ತೋರಿಕೆಯ ಪ್ರೀತಿ,ಎಲ್ಲವು ನಾಟಕ ಎಂದು ಭಾಸವಾಗುತ್ತ್ತಿತ್ತು.ಸುಮ್ಮನೆ ಮದುವೆ,ಉಪನಯನ,ಪೂಜೆ ಮುಂತಾದ ಸಮಾರಂಭಗಳಿಗೆ ಮಾತ್ರ ನಾವು ಒಟ್ಟು ಸೇರುತ್ತೇವೆ,ಜೋರಾಗಿ ನಗುತ್ತೇವೆ,ಸಂಭ್ರಮಿಸುತ್ತೇವೆ,ಮತ್ತೆ ನಮ್ಮ ನಮ್ಮ ದಾರಿ ನಮಗೆ.ಪರಸ್ಪರರ ಕಷ್ಟ ಸುಖಗಳಿಗೆ ನಮ್ಮ ಸ್ಪಂದನ ಏನೇನೂ ಸಾಲದು.ಸೋತಾಗ ಎತ್ತಿ ಹಿಡಿದು ಬೆಂಬಲಕ್ಕೆ ನಿಂತು ಮುನ್ನಡೆಸುವುದರಲ್ಲಿ ನಮ್ಮ ಕುಟುಂಬ ಭಾರಿ ಹಿಂದೆ ಉಳಿದಿದೆ,ಹೀಗೆ ವಿಮರ್ಶೆ ಮಾಡುತ್ತ ಹೋದಂತೆ ರಾಯರಿಗೆ ಕರಾಳ ಸತ್ಯ ಗೋಚರವಾಗತೊಡಗಿತು.ನಮ್ಮ ಅಣ್ಣ ತಮ್ಮಂದಿರಿಗೆ,ಅಪ್ಪಚ್ಚಿ ದೊಡ್ಡಪ್ಪನವರಿಗೆ ಸಹಾಯ ಮಾಡುವಾಗ ನಾವು ಹಿಂದೆ ಮುಂದೆ ನೋಡುತ್ತೇವೆ,ಇನ್ನು ನಾವು ಹೊರಗಿನವರಿಗೆ ಸಹಾಯ ಮಾಡಿದ ಹಾಗೆ.ಈ ಉನ್ನತ ರಾಷ್ಟ್ರ,ಸಹೋದರತ್ವ ಎಲ್ಲ ಬರಿ ಪುಸ್ತಕಗಳಿಗೆ ಮೀಸಲಾಯಿತು ಹೀಗೆ ಯೋಚನೆ ಮಾಡಿದಷ್ಟು ಹೊಸ ಹೊಸ ಅರ್ಥ ಕೊಡುತ್ತಿತ್ತು.

ಆದರೆ ಇವೆಲ್ಲವೂ ಕನಸಾಗಿಯೇ ಇರಬೇಕೆಂದೇನೂ ಇಲ್ಲ ಎಂದು ರಾಯರಿಗೆ ಉತ್ಸಾಹ,ಪ್ರೋತ್ಸಾಹ ನೀಡಿದವರು ಅವರ ಮಿತ್ರರಾದ ಪ್ರಸನ್ನರ ಮಾತುಗಳು.ಅಂದು ಪ್ರಸಾದ,ಸತೀಶರು ಹೇಳಿದ್ದ ಮಾತು ರಾಯರಲ್ಲಿ ಹೊಸ ಉತ್ಸಾಹ ತುಂಬಿತು.ಪ್ರಸನ್ನರು ನೀಡಿದ ತುಂಬು ಕುಟುಂಬದ ಕಲ್ಪನೆ ಅಂತೂ ಮರೆಯಲೇ ಅಸಾಧ್ಯ.ಪ್ರಸನ್ನರು ಹೇಳಿದ ಹಾಗೆ ಅವರ ಮಿತ್ರರೊಬ್ಬರು ತಮ್ಮ ದೊಡ್ಡಪ್ಪನ ಮಗ ಅಣ್ಣನ ಮನೆಯಲ್ಲಿ ನಿಂತು ಕೆಲಸಕ್ಕೆ ಹೋಗುತ್ತಿದ್ದರು.ಅಣ್ಣನ ಬೈಕ್,ಕಾರ್ ಓಡಿಸುತ್ತಿದ್ದರು.ಅಲ್ಲಿ ಪರಸ್ಪರರ ನಡುವೆ ಪ್ರೀತಿ,ವಿಶ್ವಾಸ ಇತ್ತು.ಇನ್ನು ಸತೀಶರದಾದರೋ ೪೨ ಜನರ ತುಂಬು ಕುಟುಂಬ,ಎಲ್ಲರು ಬೇರೆ,ಬೇರೆ ಇದ್ದಾರೆ.ಯಾರಿಗೂ ಪಾಲು ಆಗಲಿಲ್ಲ.ಎಲ್ಲ ಕಾರ್ಯಕ್ರಮಗಳಲ್ಲಿ ಜೊತೆ ಸೇರುತ್ತಾರೆ,ಒಟ್ಟಾಗಿ ಆಚರಿಸುತ್ತಾರೆ,ಎಲ್ಲಕ್ಕಿಂತ ಹೆಚ್ಚಾಗಿ ಪರಸ್ಪರಿಗೆ ಸಹಾಯ ಮಾಡುತ್ತಾರೆ.ಏನೇ ಹೊಸತು ಗೊತ್ತಾದರೂ ತಿಳಿಸುತ್ತಾರೆ.ಮೈಸೂರಲ್ಲಿ ಯಾರೋ ಒಬ್ಬರು ಸುಮಾರು ೧೦ ಎಕರೆ ಜಾಗ ಮಾರುತ್ತಿದ್ದರು ಬಹಳ ಕಡಿಮೆ ದರಕ್ಕೆ,ಯಾರೋ ಒಬ್ಬರಿಗೆ ಗೊತ್ತಾಯಿತು,ಕೂಡಲೇ ಎಲ್ಲರಿಗು ಗೊತ್ತಾಯಿತು,ಮುಂದೆ ಒಳ್ಳೆ ರೇಟು ಬರುವ ಸಾಧ್ಯತೆ ಇದೆ,ಎಲ್ಲರು ಮಾತಾಡಿಕೊಂಡರು.ಆ ೧೦ ಎಕರೆ ಅವರೇ ಒಂದು ಕುಟುಂಬದವರು ಬೇರೆ ಬೇರೆಯಾಗಿ ಮಾಡಿಕೊಂಡರು.

ಇಂತಹ ಸಂಭಂದಗಳು ನಮ್ಮಲ್ಲಿವೆಯೇ?ಹೀಗೆ ನಾವು ಎಷ್ಟು ಪರಸ್ಪರ ಅರಿತುಕೊಂಡಿದ್ದೇವೆ,ಪರಸ್ಪರರ ಸಹಾಯ ಮಾಡಿದ್ದೇವೆ? ಇದು ಹೀಗೆ ಮುಂದುವರೆಯಲು ನಾನು ಬಿಡುವುದಿಲ್ಲ. ನಮ್ಮದು ಎಂದಿಗೂ ತುಂಬು ಕುಟುಂಬ ಪ್ರೀತಿ,ಪ್ರೇಮ ನಂಬುಕೆಯೇ ಜೀವಾಳ.ಅದನ್ನು ನಾನು ಸಾಧಿಸುತ್ತೇನೆ ಎಂದು ರಾಯರು ಅಂದೇ ಯೋಚಿಸಿದ್ದರು.ಯಾವುದನ್ನೇ ಸಾಧಿಸಬೇಕಾದರು ಮೊದಲು ಅರ್ಥಿಕ ಸ್ವಾವಲಂಬನೆ ಅಗತ್ಯ,ಅದು ಇಂದು ಸಾಧ್ಯವಾಗಿದೆ,ಇನ್ನೊಂದು ಅದನ್ನ ಮಾಡಲೇಬೇಕೆನ್ನುವ ಇಚ್ಛಾಶಕ್ತಿ ೨ ಸೇರಿದೆ.ಮೊದಲು ನಾವೆಲ್ಲ ಒಂದಾದರೆ ಮುಂದೆ ಮನದಲ್ಲಿ ಹಮ್ಮಿಕೊಂಡ ಎಷ್ಟೋ ಯೋಜನೆಗಳಿವೆ.ರಾಯರು ಏನೋ ಮಾಡ ಹೊರಟಿದ್ದಾರೆ ಜಾಗ ಖರೀದಿ ಆಗಿದೆ.ಇನ್ನೇನು ಕೆಲಸ ಶುರುವಾಗಲಿದೆ.


ಮುಂದುವರೆಯುವುದು.......

No comments:

Post a Comment