Friday, March 11, 2011

ಪರೀಕ್ಷೆಯ ಹಿಂದಿನ ಆ ದಿನ...

ಪರೀಕ್ಷೆ  ಯಾವುದೇ ಇರಬಹುದು ಅದು ಇಂಟರ್ನಲ್ ಅಥವಾ ಸೆಮೆಸ್ಟರ್ ಎಂಡ್ ಪರೀಕ್ಷೆ.. ಆದ್ರೆ ಪರೀಕ್ಷೆ ಪರೀಕ್ಷೆಯೇ. ನಾವು ಏನು ಅಂತ ಪರೀಕ್ಷೆ ಮಾಡೋದೇ ಈ ಪರೀಕ್ಷೆ.ನಿಜವಾಗಿ ಹೇಳೋದಾದರೆ ನಾವು ಏನು ಅಂತ ನಿಜವಾಗಿ ಪರೀಕ್ಷೆ ಮಾಡದೇ ಇರೋದು ಈ ಪರೀಕ್ಷೆಯೇ.ಹೀಗೆ ಈ ಪರೀಕ್ಷೆ ಅನ್ನೋದೇ  ಒಂದು ಪರೀಕ್ಷೆಯೇ. 

ಸಾಮಾನ್ಯವಾಗಿ ಎಲ್ಲರು ಪರೀಕ್ಷೆಯ ಹಿಂದಿನ ದಿನ ಓದುತ್ತಾರೆ.ಮತ್ತು ಆ ದಿನ ಮಾತ್ರ ಓದುತ್ತಾರೆ.ಆ ದಿನದ  ಟೆನ್ಶನ್ ನಲ್ಲಿ  ಓದಿದಷ್ಟು  ವೇಗವಾಗಿ  ಉಳಿದ ದಿನ ಓದಲು  ಆಗುವುದಿಲ್ಲ. ಆವತ್ತೇ  ಎಲ್ಲ  ತಲೆಗೆ  ಹತ್ತುವುದು  ಬಹಳ ಬೇಗ.ಅದು ಎಷ್ಟು ಬೇಗ ಓದಿ  ಅರ್ಥ  ಮಾಡಿಕೊಳ್ಳುತ್ತೇವೆ  ಎಂದರೆ  ಕನಸಿನಲ್ಲೂ  ಊಹಿಸಲು  ಸಾಧ್ಯವಾಗದಷ್ಟು. ಕೊನೆಗೆ ಪರೀಕ್ಷೆಗೆ ಹೋಗುವಾಗ ಛೆ ಸ್ವಲ್ಪ ಮೊದಲೇ ಓದಿದ್ದರೆ ಇನ್ನು ಚೆನ್ನಾಗಿ ಮಾಡಬಹುದಿತ್ತು ಅಂತ ಅನಿಸುವುದು ಸರ್ವೇ ಸಾಮಾನ್ಯ.ನಾನು ಇದಕ್ಕೆ ಅಪವಾದವಲ್ಲ.

ಆದರೆ ಇತ್ತೀಚಿಗೆ ನನಗೆ ಒಂದು ವಿಚಿತ್ರ ಮನೋಭಾವ ಸುರುವಾಗಿದೆ. ನನಗೆ ಪರೀಕ್ಷೆಯ ಹಿಂದಿನ ದಿನ ಓದುವುದನ್ನು ಬಿಟ್ಟು ಬೇರೆ ಏನಾದರು ಮಾಡಬೇಕೆಂಬ ತುಡಿತ ಎಷ್ಟು ಬಲವಾಗಿ ಇರುತ್ತದೆಯೆಂದರೆ ನನ್ನನ್ನೇ ನಾನು ನಿಯಂತ್ರಿಸಲು ಆಗದಷ್ಟು.ಅಂದು ನನಗೆ ಲೇಖನ ಬರೆಯುವ,ಇಲ್ಲವೇ ಬೇರೆ ಏನಾದರು ಓದುವ,ಪ್ರೊಗ್ರಾಮ್(ಕಂಪ್ಯೂಟರ್ ಪ್ರೊಗ್ರಾಮ್) ಮಾಡುವ ಎಂದೆಲ್ಲ   ಅನಿಸುವುದು.ಆ ಭಾವನೆ ಬಹಳ ಆಳವಾಗಿರುತ್ತದೆ ಮತ್ತು ಜೋಷ್ ಎಷ್ಟು ಇರುತ್ತದೆ ಎಂದರೆ ಮಾಡಿ ಮುಗಿಸಿಯೇ ಬಿಡುವ ಎಂಬಷ್ಟು.ಆಮೇಲೆ ನಿಧಾನವಾಗಿ ವಾಸ್ತವವನ್ನು ಯೋಚಿಸಿ ಪಾಠವನ್ನು ಬೇಕೋ ಬೇಡವೋ ಎಂಬಂತೆ  ಓದಿ ಮುಗಿಸಿ ಪರೀಕ್ಷೆ ಬರೆದು ಬಂದ ಮೇಲೆ ಸರಿ ವ್ಯತಿರಿಕ್ತ ನನ್ನ ಯೋಚನೆ!!ಹಿಂದಿನ ದಿನ ಇದ್ದ ಲೇಖನ,ಬೇರೆ ಓದುವ,ಪ್ರೊಗ್ರಾಮ್ ಮಾಡುವ ಯಾವುದೇ ಹುಚ್ಚು ಇರುವುದಿಲ್ಲ.ಆ ದಿನ ಕೂತುಕೊಂಡು ಆವತ್ತು ಮುಗಿದ ಪರೀಕ್ಷೆಯದ್ದು ಓದಬೇಕು ಅಂತ ಅನಿಸುತ್ತದೆ.ವಿಚಿತ್ರವಾದರೂ ಸತ್ಯ ಇದೊಂದು ಹುಚ್ಚು ಮನಸ್ತಿತಿ!!

ವಾಸ್ತವ ಏನೆಂದರೆ ನಾನು ಪರೀಕ್ಷೆಯ ಹಿಂದಿನ ದಿನ ಬೇರೆ ಏನು ಮಾಡುವುದಿಲ್ಲ ಹಾಗೆಯೇ ಮುಗಿದ ದಿನ ಆ ಸಬ್ಜೆಕ್ಟ್ ನ್ನು ಓದುವುದಿಲ್ಲ.ಆದರೆ ಇದರ ನಡುವೆ ಮನಸ್ಸಿನಲ್ಲಾಗುವ ತೊಯ್ದಾಟದಲ್ಲಿ ಸುಮಾರು ಹೊತ್ತು  ಕಳೆದು  ಹೋಗುತ್ತದೆ  ಎಂಬುದಂತೂ  ಸತ್ಯ!! 

No comments:

Post a Comment