Thursday, February 18, 2010

!!!ಜೀವನವಲ್ಲ ಬರೀ ಕಥೆ!!!

ಅಂದು ಜನವರಿ ೧೫, ೫ನೆಯ ಸೆಮಿಸ್ಟರ್ ನ ಕೊನೆಯ ಪರೀಕ್ಷೆ.ಮೊದಲೇ ಒಂದು ಪರೀಕ್ಷೆ ಹಾಳಾಗಿ ಉತ್ಸಾಹ ಎಲ್ಲ ಇಳಿದಿತ್ತು. ಎಂದು ಈ ಪರೀಕ್ಷೆ ಮುಗಿಯುವುದೋ,ಎಂದು ನಾನು ಮನೆ ಸೇರುವುದೋ ಎಂದು ಮನಸ್ಸು ಹಪಿಸುತ್ತಿತ್ತು.ಅಂದು ಬೇರೆ ಗ್ರಹಣ.ಅದು ಸುಮಾರು ೫೦ ವರ್ಷದ ನಂತರ ಬಂದ ಭಾರಿ ದೀರ್ಘ ಅವದಿಯ ಗ್ರಹಣ.ಆದರೆ ಈ ಸಾರಿ ಕಟಕ ರಾಶಿಯವರಿಗೆ ಗ್ರಹಣ ಹಿಡಿಯುವುದಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿತ್ತು.ಪಂಚಾಗ ತೆಗೆದು ನೋಡಿದಾಗ ಅಬಾಲ ವೃದ್ದರು ಬೆಳಗ್ಗೆ ೮ ಗಂಟೆಯ ಒಳಗೆ ತಿಂಡಿ ಕಾಫಿ ಮಾಡಬಹುದು ಆಮೇಲೆ ಸಂಜೆ ೪ ಗಂಟೆಯ ಮೇಲೆ ಎಂದು ಬರೆದಿತ್ತು.ನಾನು ನಂಬುಗೆಯ ವಿಚಾರದಲ್ಲಿ ಮಧ್ಯಮ ವರ್ಗಕ್ಕೆ ಸೇರಿದವ.ನನ್ನ ರೂಂ ಮೆಟ್ ನ ತಾಯಿ ಮೊದಲೇ ಫೋನ್ ಮಾಡಿ,ಅವನಿಗೆ ಶಿವ ನಾಮ ಜಪಿಸುವಂತೆ ಹೇಳಿದ್ದರು.ಅವನಿಗೆ ಅಂದು ಪರೀಕ್ಷೆ ಇರಲಿಲ್ಲ.ಹಾಗಾಗಿ ಅವನು ಮುಂಚಿನ ದಿನವೇ ಬ್ರೆಡ್,ಬಿಸ್ಕೆಟ್ ಎಲ್ಲ ತಂದು ರೆಡಿಯಾಗಿದ್ದ.ಹೀಗೆ ಕೇಳಿದವರೆಲ್ಲರು ಆಚರಣೆ ಮಾಡುವವರೇ ಎಂದಾದಾಗ ನನಗೆ ಮನದಲ್ಲೇ ಸಂಕಟ.ಮೆಸ್ಸಲ್ಲಿ ಕೇಳಿದರೆ ನಾವು ಊಟ ಮಾಡುವುದಿಲ್ಲ,ನೀವು ಬರುವುದಾದರೆ ಮಾಡುತ್ತೇವೆ ಅಂದರು.ಯಾರೂ ಬರಲು ಸಿದ್ದರಿಲ್ಲ,ನಾನು ಮೊದಲೇ ಪರೀಕ್ಷೆ ಮುಗಿದ ಕೂಡಲೇ ಬಸ್ ಹತ್ತಿ ಊರಿಗೆ ಹೋಗುವುದೆಂದು ನಿಶ್ಚಯಿಸಿದ್ದೆ.ಮುಂಚಿನ ದಿನವೇ ಹೇಳಿ ಮೆಸ್ಸಲ್ಲಿ ೭ ೩೦ಗೆ ತಿಂಡಿಗೆ ಹೋದೆ,ಅವಲಕ್ಕಿ ತಿಂದು,ಟೀ ಕುಡಿದು ರೂಂಗೆ ಬಂದಾಗ ೮ ೧೫,ಇನ್ನು ಪರೀಕ್ಷೆ ಸುರುವಾಗಲು ೧ ಗಂಟೆ ಬಾಕಿ ಇದೆ.ಟೆನ್ಶನ್ ಏರುತ್ತಿತ್ತು,ಮತ್ತೊಮ್ಮೆ ತಿರುವಿ ಹಾಕಿದ್ದು ಆಯಿತು.

ಕಾಲೇಜಿಗೆ ಗೆಳೆಯನ ಸ್ಕೂಟಿಯಲ್ಲಿ ಬಂದೆ ೯ ೨೦ ಬೆಲ್ ಆಗಿತ್ತು,ಓಡೋಡಿ ಬರುವಾಗ ನಮ್ಮ ಮುಂದೆ ಕಲಿಸಿದ ಗುರುಗಳು ಹೋಗುತ್ತಿದ್ದರು.ಗಡಿಬಿಡಿಯಲ್ಲಿ ಲೆಡ್ ಬಾಕ್ಸ್ ಕೈಯಿಂದ ಬಿತ್ತು.ಕೂಡಲೇ ನಮ್ಮ ಸರ್ ಒಂದು ಲೆಡ್ ತಗೊಂಡು ಹೋಗಪ್ಪ,ಉಳಿದದ್ದು ಇರಲಿ ಎಂದರು.ಸರಿ ಟೈಮ್ ಆಗಿತ್ತು,ನನಗೂ ಬೇರೆ ದಾರಿ ಇರಲಿಲ್ಲ,ನಾನು ಸೀಧಾ ಒಳಗೆ ಹೋದೆ.ಕಾಲು ಘಂಟೆ ಬಿಟ್ಟು ನಮ್ಮ ಸರ್ ಬಂದರು.ಅವರ ಕೈಯಲ್ಲಿ ಎಲ್ಲ ಲೆಡ್ ಗಳು ಇದ್ದವು,ಅವರು ಪಾಪ ಎಲ್ಲವನ್ನು ಹೆಕ್ಕಿ,ಓರಣವಾಗಿ ಜೋಡಿಸಿ ಒಂದೂ ತುಂಡಾಗದ ಹಾಗೆ ತಂದಿದ್ದರು.ಅವರ ಪ್ರೀತಿ,ವಿಶ್ವಾಸಕ್ಕೆ ಸದಾ ಚಿರಋಣಿ.

ಪೇಪರ್ ಸುಲಭ ಇತ್ತು.ಹೋದ ಜೀವ ಬಂದ ಹಾಗಾಯಿತು.೧೧ ೪೫ಕ್ಕೆ ಗ್ರಹಣ ಹಿಡಿಯಲು ಸುರುವಾಯಿತು.ಆದರೆ ಅದಾಗಲೇ ನನಗೆ ಪೇಪರ್ ನ ಹೆಚ್ಚಿನ ಭಾಗ ಮುಗಿಸಿಯಾಗಿತ್ತು.ಮತ್ತೊಮ್ಮೆ ನೋಡಿ ಎಲ್ಲ ಸರಿ ಇದೆ ಎಂದು ಖಾತರಿ ಪಡಿಸಿಕೊಂಡು ಪೇಪರ್ ಕೊಟ್ಟು ಹೊರ ಬಂದಾಗ ೧೨ ೩೦.೧ ಗಂಟೆಗೆ ಬಸ್ ಅದರಲ್ಲಿ ನಾನು ಹೋದರೆ ಪುತ್ತೊರಿಗೆ ೭ ಗಂಟೆಗೆ ಅಲ್ಲಿಂದ ೧ ಗಂಟೆ ಅಡ್ಯನಡ್ಕಕ್ಕೆ. ಮತ್ತೆ ಅರ್ಧ ಗಂಟೆ ನಡೆದರೆ ಮನೆ,ವಾವ್ ಮನಸ್ಸು ಫುಲ್ ಖುಷಿಯಾಗಿತ್ತು.

ಸುದೇವ "ಬಿ ಎಂ ಎಚ್"ವರೆಗೆ ಡ್ರಾಪ್ ಕೊಟ್ಟ.೧ ಗಂಟೆಗೆ ಕರೆಕ್ಟ್ ಆಗಿ ರಾಜಹಂಸ ಬಂತು.ಸರಿ ಸುದೇವನಿಗೆ ಬಾಯಿ ಎಂದು ಹೇಳಿ ಬಸ್ ಹತ್ತಿದೆ.ಬಸ್ ಖಾಲಿ ಇತ್ತು.ಹಿಂದೆ ಒಂದಿಬ್ಬರು ಆಂಟಿಯಂದಿರು ಇದ್ದರು.ಇನ್ನೊಂದು ಬದಿಯಲ್ಲಿ ೩ ಜನ ನಮ್ಮ ಮಲೆಯಾಳಿ ಸಾಹೇಬರಿದ್ದರು.ಸೀಟನ್ನು ಇನ್ನು ಬಗ್ಗಿಸಲು ಸಾಧ್ಯವಿಲ್ಲ ಎನ್ನುವಷ್ಟು ಬಗ್ಗಿಸಿ ಒರಗಿಕೊಂಡೆ.ಮೋಡ ಕವಿದ ವಾತಾವರಣ,ಮಧ್ಯ ಗ್ರಹಣ.ಮನಸ್ಸು ಬೇಡ,ಬೇಡ ಎಂದರು ಹಾಳಾದ ಪರೀಕ್ಷೆಯ ಬಗ್ಗೆಯೇ ಯೋಚಿಸುತ್ತಿತ್ತು.ಮನಸ್ಸಿಗೆ ಬೇರೆ ಏನಾದರು ಯೋಚನೆ ಕೊಡೋಣ ಎಂದು ೧೭ ಕ್ಕೆ ಇದ್ದ ಚಿಕ್ಕಪ್ಪನ ಎಂಗೆಜುಮೆಂಟ್ ಬಗ್ಗೆ ಯೋಚಿಸಲು ಶುರು ಮಾಡಿದೆ ಮನಸ್ಸು ಕೇಳಲಿಲ್ಲ.ಏನೇನು ಯೋಚನೆ ಮಾಡಿದರು ಮನಸ್ಸು ಮಾತ್ರ "ಎಫ್ ಎ ... ಎಲ್ " ಎನ್ನುತ್ತಿತ್ತು.ಇದ್ದಕ್ಕಿಂದಂತೆ ಬಸ್ ನಿಂತಿತು ಡ್ರೈವರ್ ಬಸ್ ಇಳಿದು ಹೋಗಿ ಅಲ್ಲೇ ರಸ್ತೆ ಬದಿಯಲ್ಲಿ ತರಕಾರಿ ರಾಶಿ ಹಾಕಿ ಮಾರಾಟ ಮಾಡುತ್ತಿದ್ದ ಹಳ್ಳಿಗನಲ್ಲಿ ಚೌಕಾಶಿ ಮಾಡುವುದು ಕಾಣಿಸಿತು.ಹಿಂದೆ ಇದ್ದಂತಹ ಸಾಹೇಬರು ಅವರಷ್ಟಕ್ಕೆ "ಸರಕಾರಿ ಬಂಡಿ ನಿರ್ಥಿತ್ತು ಕಚ್ಚೋಡ ಅಕುನ್ನು ನಾ........"(ಸರಕಾರಿ ಗಾಡಿ ನಿಲ್ಲಿಸಿ ವ್ಯಾಪಾರ ಮಾಡ್ತಾನೆ) ಎಂದು ಅವರ ಭಾಷೆಯಲ್ಲಿ ಬೈಯುತ್ತಿದ್ದರು.ಹುಣಸೂರು ಕಳೆಯಿತು,ಕುಶಾಲನಗರ ಬಂತು ೩ ಗಂಟೆ ೧೦ ನಿಮಿಷ.ಗ್ರಹಣ ಆಗ ತಾನೆ ಬಿಟ್ಟಿತು.ಆದರೆ ನನಗೆ ಗ್ರಹಣ ಹಿಡಿದದ್ದು ಆಗಲೇ ಇಂದಿಗೂ ಬಿಡಲಿಲ್ಲ.

ಅವ ಎಲ್ಲಿಂದ ಬಂದನೋ ಗೊತ್ತಿಲ್ಲ.ಸೀದಾ ಬಂದು ನನ್ನ ಪಕ್ಕದಲ್ಲೇ ಕುಳಿತ.ನನ್ನಿಂದ ಒಂದು ೬,೭ ವರ್ಷ ಸೀನಿಯರ್ ಇರಬಹುದು.ಒಳ್ಳೆ ಟಿಪ್ ಟಾಪ್ ಆಗಿದ್ದ.ಬಂದವನೇ ನನ್ನನ್ನು ಮಾತಿಗೆ ಎಳೆದ.ಅದು ಇದು ಕಾಲೇಜು,ಊರು ಎಲ್ಲ ಕೇಳಿದ.ನನ್ನ ಎಲ್ಲ ಉತ್ತರದಲ್ಲಿ ಇದ್ದ ನಿರಾಸಕ್ತಿ ಅವನಿಗೆ ಬಹಳ ಬೇಗ ಗೊತ್ತಾಯಿತು.ಏನಾದರು ತೊಂದರೆ ಇದೆಯೇ ಎಂದು ಕೇಳಿದ,ನಾನು ಹಾಗೇನಿಲ್ಲ ಎಂದೆ.ಆದರೆ ಅವನು ಬಿಡಬೇಕಲ್ಲ,ಮತ್ತೆ ಮತ್ತೆ ಒಕ್ಕಿ ಕೇಳಿದ.ಕೊನೆಗೆ ನಾನು ನನಗೆ "ಎಫ್ ಎ ... ಎಲ್"ನದೇ ಚಿಂತೆ,ಹೋಗಿ ಒಂದೆರಡು ದಿನ ಅಷ್ಟೇ ಊರಲ್ಲಿ,ಮತ್ತೆ ತಿರುಗಿ ಬರಬೇಕು ಎಂದೆ.ಅದನ್ನು ಕೇಳಿ ಆತ ಜೋರಾಗಿ ನಗತೊಡಗಿದ.ನನಗೆ ಹಾಗೇ ಸಿಟ್ಟು ಏರಲು ಸುರುವಾಯಿತು.ನೋಡು ಒಂದು ಪರೀಕ್ಷೆ ಹಾಳದ್ದಕ್ಕೆ ಯಾಕೆ ಅಷ್ಟು ಚಿಂತೆ ,ನನ್ನ ಒಬ್ಬ ಮಿತ್ರನ ಕಥೆ ಹೇಳುತ್ತೇನೆ,ನೀನು ಉತ್ತರ ಹೇಳುತ್ತೀಯ ಎಂದ.ಉತ್ತರದ ವಿಷಯ ಆಮೇಲೆ ಕಥೆ ಏನು ಹೇಳು ಎಂದೆ.ಮಾತಿನ ಮಧ್ಯೆ ಅಲ್ಲಲ್ಲಿ ತಮಿಳ್,ತೆಲುಗು,ಮಲಯಾಳ ಮೂವಿ ಡೈಲಾಗ್ ಅನ್ನು ತುರುಕಿಸುತ್ತಿದ್ದರು.ನನಗೆ ನಂದೇ ಬೇಕಾದಷ್ಟಾಗಿತ್ತು,ಇನ್ನು ಇವರ ಕಥೆ ಯಾರು ಕೇಳ್ತಾರೆ ಅಂತ ಇದ್ದೆ.ಬ್ರದರ್ ಕಥೆ ಶುರು ಮಾಡಿದರು.

"ಹೀರೋವಿನ ಊರು ಬಾಳೆತೋಟ. ಬೆಳ್ಳಾರೆ,ವಾರಾಣಸಿ,ಚೊಕ್ಕಾಡಿ ಇವೆಲ್ಲ ಅಲ್ಲೇ ಸಮೀಪದಲ್ಲಿರುವ ಊರುಗಳು.ಕಿಶೋರ್ ಹುಟ್ಟಿ ಬೆಳೆದದ್ದು ಅಲ್ಲೇ,ಮಧ್ಯಮ ವರ್ಗದ ಕುಟುಂಬ,ತಂದೆ,ತಾಯಿ,ಅಜ್ಜ,ಅಜ್ಜಿ ಮತ್ತು ಒಬ್ಬಳು ತಂಗಿ ವಿದ್ಯಾ ಇದ್ದಳು.ಕಿಶೋರ್ ನ ತಂದೆಗೆ ಬರಿ ೧ ಎಕರೆ ಅಡಿಕೆ ತೋಟವಿತ್ತು.ಅದರಲ್ಲೇ ಕುಟುಂಬ ನಿರ್ವಹಣೆ ಆಗಬೇಕಿತ್ತು.ಒಳ್ಳೆ ಫಸಲು ಬಂದರೆ ೨ ೩೦,ಇಲ್ಲವೇ ೩ ಖಂಡಿ ಅಡಿಕೆ ಆಗುತ್ತಿತ್ತು.ಒಮ್ಮೊಮ್ಮೆ ೧ ಖಂಡಿಗೂ ಇಳಿದದ್ದು ಇದೆ.ಬರಿ ಊಟ,ಬಟ್ಟೆಗೆ ಆದರೆ ಸಾಲುತ್ತಿತ್ತು.ಆದರೆ ಕಿಶೋರ್ ಮನೆಯಲ್ಲಿ ಅಜ್ಜ,ಅಜ್ಜಿ, ಇಬ್ಬರಿಗೂ ಖಾಯಿಲೆ ಇತ್ತು.ಮತ್ತೆ ಅಮ್ಮನಿಗೂ ಸೊಂಟ ನೋವು,ಕೈ ಗಂಟು ನೋವು ಎಂದು ಆಗಾಗ ಔಷದ ಬೇಕಾಗುತ್ತಿತ್ತು.ಎಲ್ಲರಿಗೂ ಔಷದ ತಂದು,ತಂದು ಇರೋ ಜಾಗದಲ್ಲಿ ಕೆಲಸ ಮಾಡಿ,ಮಾಡಿ ಕಿಶೋರ್ ತಂದೆ ಹೈರಾಣಾಗಿದ್ದರು.ಆದರು ಏನು ಹೊರಗೆ ತೋರಿಸುತ್ತಿರಲಿಲ್ಲ.ಹೊಟ್ಟೆ ಉರಿಸಲು ಇಷ್ಟು ಸಾಲದೆಂಬಂತೆ ಕಿಶೋರ್ ೯ ನೆಯ ತರಗತಿಯಲ್ಲಿದ್ದಾಗ ಮುದ್ದಿನ ತಂಗಿ ವಿದ್ಯಾ ಬ್ರೈನ್ ಹ್ಯಾಮರೆಜ್ ಆಗಿ ಸತ್ತು ಹೋದಳು.ಕಿಶೋರ್ ಗಿಂತ ೧ ವರ್ಷ ಸಣ್ಣ,ಕಿಶೋರ್ ಗಂತೂ ತಂಗಿ ಎಂದರೆ ಪ್ರಾಣ,ತನಗೆ ಸ್ವಲ್ಪ ಕಡಿಮೆ ಅದರೂ ಪರವಾಗಿಲ್ಲ ತಂಗಿಗೆ ಮಾತ್ರ ಏನೂ ಕಡಿಮೆ ಆಗಬಾರದು ಎಂಬಂತೆ ನೋಡಿಕೊಳ್ಳುತ್ತಿದ್ದ.ಕಲಿಕೆಯಲ್ಲೂ ಅಣ್ಣನ ಹಾಗೆಯೆ ಮುಂದಿದ್ದಳು,ಅವಳಿಗೆ ಡಾಕ್ಟರ್ ಅಗಬೇಕೆಂದಿತ್ತು,ಕಿಶೋರ್ ಹೇಳಿದ್ದ ಹೇಗಾದರೂ ಮಾಡಿ ಕಳಿಸುತ್ತೇನೆ,ಅವಳು ಹಾಗೆ ಮನೆಯಲ್ಲಿ ಎಲ್ಲ ವಿಷಯದಲ್ಲೂ ಅಣ್ಣನ ಪರ ವಹಿಸಿಯೇ ಮಾತಾಡುತ್ತಿದ್ದಳು.ಆದರೆ ಇಂದು ಎಲ್ಲ ನೆನಪು ಮಾತ್ರ. ಆ ಕೊರಗಿಂದ ಹೊರ ಬರಲು ಆ ಕುಟುಂಬಕ್ಕೆ ತುಂಬಾ ಸಮಯ ಹಿಡಿಯಿತು.ಅದೇ ಕೊರಗಲ್ಲಿ ಅಜ್ಜ ಸತ್ತು ಹೋದರು.ಕಿಶೋರ್ ಪಿ ಯು ಸಿ ವರೆಗಿನ ಶಿಕ್ಷಣವನ್ನು ಚೊಕ್ಕಾಡಿಯಲ್ಲಿದ್ದ ಸ್ವಾಮಿ ಶಾಲೆಯಲ್ಲಿ ಮಾಡಿದ್ದ.ಮುಂದೆ ಏನು ಮಾಡುವುದು ಎಂದು ಮನೆಯಲ್ಲಿ ಎಲ್ಲ ಯೋಚಿಸುತ್ತಿದ್ದಾಗ ಕಿಶೋರ್ ಹೇಳಿದ ನಾನು ಇಂಜಿನಿಯರಿಂಗ್ ಮಾಡುವುದು ಅವನ ಕಿವಿಯಲ್ಲಿ ಅಂದು ವಿದ್ಯಾ ಹೇಳಿದ್ದು ಕೇಳಿಸುತ್ತಿತ್ತು,ಅಣ್ಣ ಇಂಜಿನಿಯರ್ ನಾನು ಡಾಕ್ಟರ್.
ವಿದ್ಯಳ ಫೋಟೋ ನೋಡುತ್ತಾ ಕುಳಿತಿದ್ದ ಕಿಶೋರ್ ನ ಆಮೇಲೆ ಯಾರೂ ಮಾತಾಡಿಸಲಿಲ್ಲ.ಬಂಧುಗಳು ಸಹಾಯ ಮಾಡಿದರು.ಇದೆ ನೀನು ಕಲಿಯುವ ಜೆ ಸಿ ಕಾಲೇಜಿಗೆ ಸೇರಿದ.೧೯೯೮ - ೨00೨ರ ಕಂಪ್ಯೂಟರ್ ಸೈನ್ಸ್ ಬ್ಯಾಚ್.ಮನೆಯಲ್ಲಿ ತುಂಬಾ ಕಷ್ಟ,ಅಲ್ಲಿನ ದುಡ್ಡು ಅಲ್ಲಿಗೆ ಸಾಲಲ್ಲ.ವಿಧ್ಯಾಬ್ಯಾಸ ಎಲ್ಲ ಬರಿ ಲೋನಲ್ಲಿ.

ಅಂದು ಕಾಲೇಜಿನ ಮೊದಲ ದಿನ,ನನ್ನ ತಂದೆ ನನ್ನ ಜೊತೆಗೆ ಬಂದಿದ್ದರು.ಡಿಪಾರ್ಟ್ಮೆಂಟ್ ಲ್ಲಿ ಪಿ ಎಸ್ ೦೦೫ನ್ನು ಹುಡುಕುತ್ತ ಇದ್ದೆ.ಆಗ ಬಂದ ಈ ಕಿಶೋರ್,ಆ ಒಳ್ಳೆ "ರಬ್ ನೆ ಬನಾದಿ ಜೋಡಿ" ಮೂವಿಯಲ್ಲಿ ಶಾರುಖ್ ಖಾನ್ ಎಂಟರ್ ಆಗ್ತಾನಲ್ಲ ಹಾಗೆ,ಒಂದು ಸ್ಪೆಕ್ಸು ,ಫುಲ್ ಫಾರ್ಮಲ್ ಡ್ರೆಸ್.ಫಸ್ಟ್ ಸೆಮ್? ನಾನು ಹಾಗೆ ಹಾ ಎಂದೆ.ಈ ರೂಂ ನಂಬರ್ ಅದನ್ನೇ ನಾವು ಹುಡುಕುತ್ತ ಇದ್ದೇವೆ ಎಂದರು ನನ್ನ ತಂದೆ.ಆಗ ಯಾರೋ ಹೇಳಿದರು ಅದು ಬಿಲ್ಡಿಂಗ್ ಬೇರೆ ಕಡೆ ಸೀದಾ ಕೆಳಗಿಳಿದು ಹೋಗಿ ಅಲ್ಲಿ ಲಾಬಿ ಹೊರಗಡೆ ಬಂದರೆ ಒಂದು ಬೈಕ್ ಸ್ಟ್ಯಾಂಡ್ ಕಾಣಿಸುತ್ತೆ ಅಲ್ಲಿ ಮತ್ತೆ ಲೆಫ್ಟ್ ಗೆ ಹೋಗಬೇಕು.ತಂದೆ ನಂಗೆ ಚೆನ್ನಾಗಿ ಓದು,ಟೆನ್ಶನ್ ಮಾಡಬೇಡ ಎಂದೆಲ್ಲ ಹೇಳುತ್ತಿದ್ದರು.ಮುಂದೆ ಇವನು,ಹಿಂದೆ ನಾನು ಹಾಗೆ ಕೆಳಗಿಳಿದು ಬಂದೆವು.ಲಾಬಿ ಹೊರಗಡೆ ಬಂದಾಗ ನಮಗೆ ಸಿಕ್ಕಿದ್ದೇ "ರಘುರಾಮ ಶಾಸ್ತ್ರೀ" ಹಾಗೂ "ರಾಜ್ ,ಪ್ರಕಾಶ್ ರಾಜ್ ".೪ ಜನ ಒಟ್ಟಾಗಿ ಕ್ಲಾಸಿಗೆ ಹೋದೆವು.

ಮುಂದೆ ಕ್ಲಾಸಲ್ಲಿ "ಶ್ಯಾನುಭೋಗ","ಚೆನ್ನ ದೇವರು","ತೀರ್ಥರಾಯರು ","ಕಾರ್ತಿಕ್","ಶರತ್","ಗೌರವ್","ತ್ರಿವಿಕ್ರಮ" ಹೀಗೆ ಸ್ನೇಹಿತರ ಪಟ್ಟಿ ಬೆಳೆಯುತ್ತಲೇ ಹೋಯಿತು.ಮೊದಲ ಸೆಮ್ ಪೂರ್ತಿ ಅಷ್ಟು ಪರಿಚಯ ಇರಲಿಲ್ಲ,ಆದರೆ ಈ ಕಿಶೋರ್ ಕ್ಯಾಡ್ ಲ್ಯಾಬ್ ಲ್ಲಿ ನನ್ನ ಹತ್ತಿರ ಕೂರುತ್ತಿದ್ದ.ಇನ್ನೊಂದು ಬದಿಯಲ್ಲಿ ಚೆನ್ನ ದೇವರು.ಮಧ್ಯದಲ್ಲಿ ನಾನು ಕೂರುತ್ತಿದ್ದೆ.ಹಾಗೆ ದಿನ ಕಳೆದಂತೆ ಕಿಶೋರ್ ಯಾಕೋ ಮನಸ್ಸಿಗೆ ಬಹಳ ಹತ್ತಿರವಾದ.ಉಳಿದವರ ಜೊತೆ ಎಲ್ಲ ಒಂದು ಹಾಯ್ ಮಾತ್ರ ಇತ್ತು,ಇವನ ಜೊತೆ ಸ್ವಲ್ಪ ಮಾತಾಡುತ್ತಿದ್ದೆ.

೨ ನೆಯ ಸೆಮ್ ಲ್ಲಿ ಪೂರ್ತಿ ಪರಿಚಯವಾಯಿತು,ಮತ್ತೆ ತಿರುಗಿ ನೋಡಿದ್ದೇ ಇಲ್ಲ,ನಾನು ಕಿಶೋರ್ ಸದಾ ಜೊತೆಯಾಗೆ ಇರುತ್ತಿದ್ದೆವು.ಇಬ್ಬರು ಸಪರೇಟ್ ರೂಂ ಲ್ಲಿ ಇದ್ದೆವು.೨ ಪರ್ಲಂಗ್ ದೂರ.ಕ್ಲಾಸಲ್ಲಿ,ಹೋಗುವಾಗ,ಬರುವಾಗ ಎಲ್ಲ ಜೊತೆಯಾಗೆ ಇದ್ದೆವು.ಗೆಳೆತನ ಬಹಳ ಬೇಗ ಗಟ್ಟಿಯಾಯಿತು.ಆಗಲೇ ನಾನು ಅವನ ಬಗ್ಗೆ ಇಷ್ಟೆಲ್ಲಾ ತಿಳಿದುಕೊಂಡದ್ದು.ತಂಗಿಯನ್ನು ಮಾತ್ರ ಅವನು ನಿತ್ಯ ಬಹಳ ಮಿಸ್ ಮಾಡ್ತಿದ್ದ.ಅವಳ ನೆನಪು ಮಾತ್ರ ಅವನನ್ನು ಬಹಳ ಕಾಡುತ್ತಿತ್ತು.ಚೆನ್ನ ದೇವರು "ಸಿ ಅರ್" ಹುದ್ದೆಗೆ ಹೊಸ ಘನತೆ,ಗೌರವ ತಂದರು.ಅವರಷ್ಟು ಪರರಿಗಾಗಿ ಕೆಲಸ ಮಾಡುವವರನ್ನು ನೋಡುವುದು ಬಿಡಿ ಕಲ್ಪನೆ ಮಾಡಲು ಸಾಧ್ಯವಿಲ್ಲ ಎಂದು ಕಿಶೋರ್ ಆಗಾಗ ಹೇಳುತ್ತಿದ್ದ.ಉಳಿದಂತೆ ಎಲ್ಲರು ಬಹಳ ಒಳ್ಳೆಯವರು.ರಘುರಾಮ ಒಳ್ಳೆಯ ಹೃದಯವಂತಿಕೆ ಉಳ್ಳ ಒಬ್ಬ ಉತ್ತಮ ಸ್ನೇಹಿತ.ಮುಂದೆ ಸೆಮಿಸ್ಟರ್ ಗಳು ಒಂದರ ಹಿಂದೆ ಒಂದು ಕಳೆದವು.೪ ನೆಯ ಸೆಮ್ ಗೆ ಬಂದಾಗ ಮಿನಿ ಪ್ರಾಜೆಕ್ಟ್ ಸುರುವಾಯಿತು.ಆಗ ನಮ್ಮ ಫ್ರೆಂಡ್ ಲಿಸ್ಟ್ ಮತ್ತು ದೊಡ್ಡದಾಯಿತು.ಕಾಂಚನ,ಸೌಮ್ಯ,ಅನುಷ್ಕ,ತನುಷ್ಕ ಎಲ್ಲರು ನಮ್ಮ ಸ್ನೇಹಿತರ ಪಟ್ಟಿಗೆ ಸೇರಿದರು.ಆದರು ಇವರ ಜೊತೆಗೆ ನಮ್ಮ ಸ್ನೇಹ ಇನ್ನೂ ಗಟ್ಟಿಯಾಗಿರಲಿಲ್ಲ.

೫ನೆಯ ಸೆಮ್ ಜೀವನದಲ್ಲೇ ಮರೆಯಲಾಗದ ಸೆಮ್."ರಘುರಾಮ,ಕಿಶೋರ್,ಶ್ಯಾನುಭೋಗ,ಕಾರ್ತಿಕ್,ತೀರ್ಥರಾಯರು,ಶರತ್ ",ನಾನು ಎಲ್ಲ ಕೂತು ತಲೆ ಕೆರ ಹಿಡಿಯುವಷ್ಟು ಕೆಲಸ ಮಾಡಿದರು ಮುಗಿಯುತ್ತಿರಲಿಲ್ಲ.ಈ ಸೆಮಿಸ್ಟರ್ ನಲ್ಲಿ ನಮ್ಮ ಎಲ್ಲರ ಭಂಧ ಬಹಳ ಗಟ್ಟಿಯಾಯಿತು.ಇಲ್ಲೇ ನಮಗೆ ಕಾಂಚನ,ಸೌಮ್ಯ,ಅನುಷ್ಕ,ತನುಷ್ಕ ಎಲ್ಲರನ್ನು ಸರಿಯಾಗಿ ಪರಿಚಯವಾದದ್ದು.ಚೆನ್ನ ದೇವರಂತು ತರಗತಿಯ ಯೋಗ ಕ್ಷೇಮ,ಕ್ಲಾಸ್ ಎರೆಂಜ್ ಮಾಡುವುದು,ಫುಲ್ ಏನೇ ಕೆಲಸ ಮಾಡಿದರು ಅದು ಎಲ್ಲರಿಗೆ ಉಪಯೋಗವಾಗುವಂತಿತ್ತು.ಹೀಗೆ ಅವರ ಬಗ್ಗೆ ಸುಮಾರು ಹೇಳಿದ.ಅಂತ "ಸಿ ಅರ್" ನೋಡೇ ಇಲ್ಲ,ನಿಂಗೆ ಹೇಗಪ್ಪ ಹೇಳುವುದು,ಅದು ಜೊತೆಗೆ ಇದ್ದವರಿಗೆ ಗೊತ್ತಾಗುತ್ತೆ ಎಂದರು "

ನಂಗೆ ಚಿನ್ಮಯ್ ನೆನಪಾಯಿತು.ನಗು ಬಂತು.ನಮ್ಮ ಕಥೆ ಹೇಳುವ ಬ್ರದರ್ ಇನ್ನು ಅಪ್ಡೇಟ್ ಆಗಿಲ್ಲ.ಅವರು ಈಗ ನಮ್ಮ ಕಾಲೇಜಿಗೆ ಬರಬೇಕಿತ್ತು,ನಮ್ಮ "ಸಿ ಅರ್" ಏನೂಂತ ನಾನು ತೋರಿಸುತ್ತಿದ್ದೆ ಎಂದು ಅನಿಸಿತು.ನಾನು ಮೌನವಾಗಿರುವುದನ್ನು ನೋಡಿ ಏನಪ್ಪಾ ಯಾಕೆ ಬೋರ್ ಆಗ್ತಿದೆಯ ಎಂದರು.ನಂಗೆ ಇನ್ನೇನು ಮನೆಯಲ್ಲಿ ಧಾರವಾಹಿ ನೋಡಿ ಅಭ್ಯಾಸ ಆಗಿದೆ,ಇದು ಅದಕ್ಕಿಂತ ಕೊಂಚ ಬೆಟರ್ ಅನ್ನಿಸಿತು.ನಮ್ಮ ಕ್ಲಾಸಿಗೂ,ಇವರ ಬ್ಯಾಚ್ ಗೂ ಏನೋ ಬಹಳ ಹತ್ತಿರದಲ್ಲೇ ಲಿಂಕ್ ಇದೆ ಅನಿಸಿತು.ನೀವು ಹೇಳಿ ಬ್ರದರ್ ಎಂದೆ."ನಿಜವಾಗಿ ಕಥೆ ಸುರುವಾದದ್ದು ಈಗಲೇ ಎಂದರು."ಯಬ್ಬ ಇವರೆಲ್ಲೋ ಟಿ ವಿ ಸೀರಿಯಲ್ಲಿಗೆ ಕಥೆ ಬರಿತಿದ್ದಿರಬೇಕು,ಇಲ್ಲಿ ಬಂದು ನನ್ನ ತಲೆ ತಿಂತಾರೆ ಅನ್ನಿಸಿತು.

"ಕಿಶೋರ್ ಗೆ ೩,೪ ನೆಯ ಸೆಮಿಸ್ಟರ್ನಲ್ಲಿ ೭೨,೭೩ ಪರ್ಸೆಂಟ್ ಮಾರ್ಕ್ಸ್ ಬಂದಿತ್ತು.ಮೊದಲ ವರ್ಷ ೮೨,೮೪ ಪರ್ಸೆಂಟ್ ಮಾರ್ಕ್ಸ್ ತೆಗೆದಿದ್ದ.ಆಗ ಸುರುವಾಯಿತು ಮನೆಯಲ್ಲಿ ತೊಂದರೆ,ದುಡ್ಡು ಕೊಟ್ಟ ಅಂಕಲ್ ಕಿಶೋರ್ ತಂದೆನ ಕೇಳಿದರಂತೆ ಇಲ್ಲಿ ಇರುವಾಗ ೯೦,೯೫ ಪರ್ಸೆಂಟ್ ಮಾರ್ಕ್ಸ್ ಬರ್ತಾ ಇತ್ತು.ಮೊದಲ ವರ್ಷ ಕಡಿಮೆ ಬಂದಾಗಲೇ ಕೇಳಬೇಕೆಂದಿದ್ದೆ,ಆದರೆ ಸುರುವಿಗೆ ಕಷ್ಟ ಇರಬಹುದೇನೋ ಎಂದು ಬಿಟ್ಟೆ.ಆದರೆ ಈಗ ನೋಡಿದರೆ ಪರ್ಸೆಂಟ್ ೭೦ಕ್ಕೆ ಕುಸಿದಿದೆ.ಏನು ನಿಮ್ಮ ಹುಡುಗ ಕಾಲೇಜಿಗೆ ಸರಿಯಾಗಿ ಹೋಗ್ತಾನೋ ಇಲ್ಲ ,ಮೂವಿ ಗೀವಿ,ಲವು ಗಿವು ಅಂತ ಊರೂರು ಸುತ್ತುತ್ತಾನೋ ಎಂದರಂತೆ.ಅಮ್ಮ ಹೇಳಿದ್ದನ್ನು ಫೋನಲ್ಲಿ ಕೇಳಿದ ಮೇಲೆ , ಆ ತಂದೆಗೆ ಹೇಗೆ ಅಗಿರಬೇಡ,ಎಂದು ಕಿಶೋರ್ ಯೋಚಿಸುತ್ತ ಕುಳಿತಿದ್ದ.ನಾನು ಹೋಗಿ ಸಮಾಧಾನ ಮಾಡುವ ಪ್ರಯತ್ನ ಮಾಡಿದೆ.ಅವನ ಹತ್ತಿರ ನಿನ್ನ ತಂದೆ "ಎನಕ್ಕು ಎಯೇ ಪುಲ್ಲೆಯ ಮೇಲೆ ನಂಬಿಕೆ ಇರುಕ್ಕು ಆನ ಉಂಗಳಕ್ಕು ಅದು ಇಲ್ಲೇ "(ನಂಗೆ ನನ್ನ ಮಗನ ಮೇಲೆ ನಂಬಿಕೆ ಇದೆ ಆದರೆ ನಿಮಗೆ ಅದು ಇಲ್ಲ ) ಎಂದು ಹೇಳಬೇಕಿತ್ತು ಎಂದೆ.ಆದರೆ ಕಿಶೋರ್ ನನ್ನ ಮಾತನ್ನು ಅರ್ಧಕ್ಕೆ ತಡೆದು,ಅದು ನಿಂಗೆ ಗೊತ್ತಾಗಲ್ಲ ಬಿಡು ನನಗೆ ೧ ರೂಪಾಯಿ ಕೊಟ್ಟವರು ಕೂಡ ದೇವರಿಗೆ ಸಮಾನ ಕಣೋ,ಏಯ್ ನಿಂಗೇನೋ ಗೊತ್ತು ನಾನು ಊಟ ಮಾಡುತ್ತಿರುವುದು,ಹಾಕಿಕೊಂಡ ಬಟ್ಟೆ ಎಲ್ಲ ಅವರಂಥ ಜನರ ಕೃಪೆ ಕಣೋ.ಆದರೆ ಬೇಜಾರು ಆಗಿರುವುದು ಇಲ್ಲಿ,ಈಗ ನೀನು ನನ್ನ ಫ್ರೆಂಡ್,ಅವರ ಬಗ್ಗೆ ಹೇಳಿದ್ದೆ ನಂಗೆ ಎಷ್ಟು ಬೇಜಾರು ಆಯಿತು,ಇನ್ನು ಅವರು ನನ್ನ ತಂದೆಯಿಂದ ವಯಸ್ಸಲ್ಲಿ ಎಷ್ಟೋ ಸಣ್ಣ ಕಣೋ,ಅವರು ಹಾಗೆ ಕೇಳಿದಾಗ ತಂದೆಗೆ ಎಷ್ಟು ಸಂಕಟ ಅಗಿರಬೇಡ,ಶೇ ಈ "ವಿ ಟಿ ಯು","ಸಿಸ್ಟಮ್", "ವ್ಯಾಲ್ಯುವೆಶನ್" ಇದೆಲ್ಲ ಅವ್ರಿಗೆ ಗೊತ್ತಿಲ್ಲ,ಅದು ಗೊತ್ತಿದ್ದವರು ಯಾರು ಕೇಳಿಲ್ಲ.ನನ್ನ ಹತ್ರ ಕೇಳಿದ್ರೆ ನಾನು ಮನವರಿಕೆ ಮಾಡುತ್ತಿದ್ದೆ,ಅವರಿಗೆ ಗೊತ್ತಾಗುತ್ತಿತ್ತು,ಅಷ್ಟಕ್ಕೂ ಅವರು ಕೇಳಿದ್ದರಲ್ಲಿ ಏನೋ ತಪ್ಪು ?ಆದ್ರೆ ತಪ್ಪು ಕೇಳಿದ್ದರಲ್ಲಿ ಅಲ್ಲ,ನನ್ನ ಹತ್ರ ಕೇಳಬಹುದಿತ್ತು,ಅದು ಬಿಟ್ಟು ಪಾಪ ಅಪ್ಪ..".

ತಮಿಳ್ ವಿಜಯ್ ಮೂವಿ ಬಹುಶ: ನಮ್ಮ ಬ್ರದರ್ ಜಾಸ್ತಿ ನೋಡ್ತಾರೆನೋ ಎಂದು ನಂಗೆ ಡೈಲಾಗ್ ಕೇಳಿದಾಗಲೇ ಅನಿಸಿತು.ನನ್ನ ತೂಕಡಿಕೆ ಹಾಗೆ ಹೊರಟು ಹೋಯಿತು,ಯಾಕೋ ಸ್ಟೋರಿ ಇಮೋಶನಲ್ ಆಗ್ತಾ ಇದೆ ಅನಿಸಿತು.ನಮ್ಮ ಬ್ರದರ್ ಕಥೆ ಹೇಳುತ್ತಲೇ ಹೋದರು.

"ಕಿಶೋರ್ ಅಷ್ಟು ಇಮೋಶನಲ್ ಆಗಿದ್ದನ್ನು ನಾನು ಎಂದೂ ನೋಡಿರಲಿಲ್ಲ.ಆದರೆ ಇನ್ನೂ ಭಯಾನಕ ಆ ೬ನೆ ಸೆಮಿಸ್ಟರ್. ಕಿಶೋರ್ ೩ ನೆಯ ಸೆಮಿಸ್ಟರ್ನಲ್ಲಿ ಇರಬೇಕಾದರೆ ಅವನ ಅಜ್ಜಿ ತೀರಿಕೊಂಡರು.ಮುಂದಿನ ಕಾರ್ಯಕ್ರಮ ಮಾಡಲು ಕೈಯಲ್ಲಿ ದುಡ್ಡಿಲ್ಲ.ಬಾಳಿಲ ಸೇವಾ ಸಹಕಾರಿ ಸಂಘದಿಂದ ೨೦೦೦೦ ಸಾವಿರ ಸಾಲ ಪಡೆದರು.ಅದೇ ವರ್ಷ ದನದ ಕೊಟ್ಟಿಗೆ ಮುರಿದು ಬಿತ್ತು,ಮಾಡದೇ ನಿವೃತ್ತಿ ಇಲ್ಲ,ಮತ್ತೆ ೫೦೦೦೦ ಎಲ್ ಡಿ ಬ್ಯಾಂಕಿಂದ ಲೋನ್ ಪಡೆದರು.ಕೃಷಿ ಸಾಲ ೭೫೦೦೦ ಸಾವಿರ ಅದು ತನ್ನ ಗರಿಷ್ಟ ಮಿತಿಯನ್ನು ತಲುಪಿತ್ತು.ಎಜುಕೇಶನ್ ಲೋನ್ ಅದರ ೨ ವರ್ಷದ ಮಿತಿ ತಲುಪಿತ್ತು.ಮುಂದಿನ ವರ್ಷ ಮತ್ತೆ ಕಾರ್ಯಕ್ರಮಕ್ಕೆ ೨೦೦೦೦ ಲೋನ್.ಬಂಧುಗಳು,ನೆಂಟರಿಷ್ಟರಲ್ಲಿ ತೆಗೆದುಕೊಂಡ ಹಣ ಆಗಲೇ ಸಾಕಷ್ಟಾಗಿತ್ತು.ಸಹಾಯ ಮಾಡುವವರೆಲ್ಲ ಮಾಡಿದರು.ಆದರೆ ಮತ್ತೆ ಎದುರಾದದ್ದು ಸೋಲೇ.ಅಡಿಕೆ ಬೆಳೆಗೆ ಕೊಳೆರೋಗ ಬಂದು ಒಂದು ಕೊಯ್ಲಿನ ಅಡಿಕೆಯೇ ಹಾಳಾಗಿ ಹೋಯಿತು.ಕಿಶೋರ್ ತಂದೆಗೆ ದುಸ್ವಪ್ನ:ಗಳು ಬೀಳಲು ಪ್ರಾರಂಭವಾದವು,ಸಾಲಕೊಟ್ಟವರು ಬಂದು ಪೀಡಿಸಿದಂತೆ,ಬ್ಯಾಂಕಿನ ಲೋನಿಗೆ ಜಮೀನು ಮನೆ ಎಲ್ಲ ಏಲಂ ಅದಂತೆ.ನೋಡ್ತಾ ನೋಡ್ತಾ ಇದ್ದ ಹಾಗೆಯೇ ಮನೆಯ ಪರಿಸ್ತಿತಿ ತೀರ ಹದಗೆಟ್ಟಿತು.ಕಿಶೋರ್ ತಂದೆ ರಾತ್ರಿಯ ಊಟ ಬಿಟ್ಟು ಎಷ್ಟೋ ವರ್ಷಗಳಾಗಿತ್ತು,ಆದರೆ ಈಗ ಬೆಳಗಿನ ತಿಂಡಿಯೂ ಬಿಟ್ಟರು.ಇಡೀ ದಿನದಲ್ಲಿ ಒಂದು ಊಟ,ಅವರು ಒಂದು ಊಟಕ್ಕೆ ಇಳಿದ ಮೇಲೆ ಕಿಶೋರ್ ತಾಯಿಯು ರಾತ್ರಿಯ ಊಟ ಬಿಟ್ಟರು.ಆದರೆ ಯಾವುದು ಕಿಶೋರ್ ಗೆ ೫ ನೆಯ ಸೆಮಿಸ್ಟರ್ ರಜೆಗೆಂದು ಮನೆಗೆ ಹೋಗುವವರೆಗೆ ಗೊತ್ತಿರಲಿಲ್ಲ.ಆ ರಜೆ ಮುಗಿಸಿ ಬಂದಾದ ಮೇಲೆಯೇ ಪರಿಸ್ತಿತಿ ತೀರಾ ಹದಗೆಟ್ಟಿರುವ ವಿಚಾರ ತಿಳಿದದ್ದು.
ಇಷ್ಟು ಸಾಲದು ಎಂಬಂತೆ ೨೦೦೧ ಜನವರಿ ೨೬ಕ್ಕೆ ಗುಜರಾತ್ ಭೂಕಂಪವಾಯಿತು.ಅಡಿಕೆ ಅತಿ ಹೆಚ್ಚು ಹೋಗುತ್ತಿದ್ದುದು ಗುಜರಾತಿಗೆ ಮತ್ತು ಉತ್ತರ ಭಾರತಕ್ಕೆ,ಭೂಕಂಪದ ನಂತರ ಅಡಿಕೆಯನ್ನು ಕೇಳುವವರೇ ಇಲ್ಲದಾಯಿತು ಕೆಜಿಗೆ ೧೨೫,೧೫೦ ರ ಘಡಿ ದಾಟಿದ್ದ ಅಡಿಕೆ ೫೦,೬೦ ರೂಪಾಯಿಗಳಿಗೂ ಯಾರಿಗೂ ಬೇಡದಾಯಿತು.ಆಗ ಮಾರ್ಚ್ ತಿಂಗಳು,ಇನ್ನು ೪ ತಿಂಗಳಲ್ಲಿ ಕ್ಯಾಂಪಸ್ ಇಂಟರ್ವ್ಯೂ ಗೆ ಕಂಪೆನಿಗಳು ಬರ್ತಾ ಇವೆ,ಮನೆಯಿಂದ ಕಾಲ್,ಏನಾದರು ಮಾಡಿ ದುಡ್ಡು ಮಾಡಲು ಆಗುತ್ತ,ಎಜುಕೇಶನ್ ಲೋನ್ ಜಾಸ್ತಿ ಇನ್ನು ಕೇಳಿದರೆ ಕೊಡ್ತಾರ,ಏಪ್ರಿಲ್ ನಲ್ಲಿ ಎಲ್ ಡಿ ಬ್ಯಾಂಕ್ ಲೋನ್ ಕಟ್ಟಬೇಕು,ಜೂನ್,ಜುಲೈಯಲ್ಲಿ ಸಹಕಾರಿ ಸಂಘದ್ದು,ಇನ್ನು ಮನೆಗೆ ಊಟಕ್ಕೆ ದುಡ್ಡಿಲ್ಲ,ಮೈಸೂರಲ್ಲಿ ಇವನದ್ದು ಖರ್ಚಿ ಹೋಗಬೇಕು,ಎಜುಕೇಶನ್ ಲೋನ್ ಇನ್ನು ಸಿಗಲು ಮುಂದಿನ ಸೆಪ್ಟೆಂಬರ್ ವರೆಗೆ ಕಾಯಬೇಕು,ಈ ವರ್ಷದ ಕಂತು ಪಡೆದಾಗಿದೆ.ಸುರುವಿಗೆ ಪಡೆಯುವಾಗಲೇ ತಂದೆ ಹೇಳಿದ್ದರಂತೆ ಇನ್ನು ಸ್ವಲ್ಪ ಜಾಸ್ತಿ ತಗೋ ಆಮೇಲೆ ಮಧ್ಯದಲ್ಲಿ ಪುನ ಕೊಡಲ್ಲ,ಒಮ್ಮೆಲೇ ಫುಲ್ ಅಮೌಂಟ್ ತೆಗೆದುಕೋ ಎಂದು.ಕಿಶೋರ್ ಸುಮ್ಮನೆ ಸಾಲದ ಹೊರೆ ಯಾಕೆ ಜಾಸ್ತಿ ಮಾಡುವುದು ಎಂದು ಎಷ್ಟು ಬೇಕೋ ಅಷ್ಟೇ ತಗೊಂಡಿದ್ದ,ಅದರೂ ಸೇಫ್ಟಿ ಗೆ ಅಂತ ಒಂದು ೨೦೦೦೦ ಜಾಸ್ತಿ ಬ್ಯಾಕ್ ಅಪ್ ಇಟ್ಕೊಂಡಿದ್ದ,ಆದರೆ ಗ್ರಹಚಾರ ಕೆಟ್ಟಾಗ ಎಲ್ಲವು ತೆಗೆದುಕೊಂಡ ನಿರ್ಧಾರಗಳು ಹಾಳಾಗುವುದು ಎಂಬುದಕ್ಕೆ ಕಿಶೋರ್ ನೆ ಉದಾಹರಣೆ,ಸೆಪ್ಟೆಂಬರ್ನಲ್ಲಿ ೫ ನೆಯ ಸೆಮೆಸ್ಟರ್ಗೆಂದು ಮನೆಯಿಂದ ಹೊರಟು ಬಂದಾಗ ಅಮ್ಮ ಕರೆದು ಹೇಳಿದ್ದರು,ಬರುವ ಸೆಮೆಸ್ಟರ್ ನಲ್ಲಿ ನೀನು ಸ್ವಲ್ಪ ದುಡ್ಡು ಮನೆಗೆ ಕೊಡಬೇಕಾದೀತು ಎಂದು,ಅಮ್ಮನನ್ನು ಸಮಾಧಾನ ಪಡಿಸಿ ಫೆಬ್ರವರಿಯಿಂದ ಎಜುಕೇಶನ್ ಲೋನಿಂದ ತಿಂಗಳಿಗೆ ೨೦೦೦ ದಂತೆ ಕೊಡುತ್ತೇನೆ ಎಂದಿದ್ದ.ಇಲ್ಲಿ ಬಂದ ಮೇಲೆ ಒಂದರ ಹಿಂದೆ ಒಂದು ಅದೃಷ್ಟ ಕೈಕೊಟ್ಟಿತು ಮೊದಲು ಮೊಬೈಲ್ ಕಳವಾಯಿತು,ನಂತರ ದಶಂಬರದಲ್ಲಿ ಅಂಕಲ್ ಕೈಯಿಂದ ತಂದಿದ್ದ ಹಳೆ ಕಂಪ್ಯೂಟರ್ ಕೆಟ್ಟಿತು,ಅದು ಇನ್ನು ರಿಪೇರಿ ಆಗುವುದಿಲ್ಲ ಎಂಬುದು ಖಾತ್ರಿಯಾದ ಮೇಲೆ ಹೊಸ "ಸಿ ಪಿ ಯು " ತೆಗೆದ.ಕೈಯಲ್ಲಿದ್ದ ೨೦೦೦೦ ಬ್ಯಾಕ್ ಅಪ್ ಖಾಲಿ.ಈಗ ಇರುವ ದುಡ್ಡು ಜೂನ್ ವರೆಗೆ ಬರಿ ಊಟಕ್ಕೆ, ಪುಸ್ತಕಕ್ಕೆ ,ರೂಂ ರೆಂಟಿಗೆ ಸಾಕು.ಜನವರಿಯಲ್ಲಿ ಬರಬೇಕಿದ್ದ ಸ್ಕಾಲರ್ಷಿಪ್ ಬರಲಿಲ್ಲ.ಮನೆಯಿಂದ ಬಂದ ಫೋನಿಗೆ ಕಿಶೋರ್ ಏನೆಂದು ಉತ್ತರಿಸಲಿ,ಮುಂದೆ ಎಜುಕೇಶನ್ ಲೋನ್ ಸಿಗಬೇಕೆಂದರೆ ಬರುವ ಸೆಪ್ಟೆಂಬರ್ ವರೆಗೆ ಕಾಯಬೇಕು,ಇನ್ನು ಕಿಶೋರ್ ಗೆ ಇಂಗ್ಲಿಷ್ನಲ್ಲಿ ಮಾತಾಡಲೇ ಸರಿಯಾಗಿ ಬರಲ್ಲ,ಇರುವುದು ೪ ತಿಂಗಳು,ಅವನು ದುಡ್ಡನ್ನು ಎಲ್ಲಿಂದ ಹೊಂದಿಸಲಿ,ಅಥವಾ ನಿತ್ಯ ಕಣ್ಣೀರಿಡುವ ತಂದೆ ತಾಯನ್ನು ಹೇಗೆ ಸಮಾಧಾನ ಮಾಡಲಿ,ಇದರೆಲ್ಲದರ ನಡುವೆ ತನ್ನ ವಿದ್ಯಾಭ್ಯಾಸವನ್ನು ಹೇಗೆ ಮುಂದುವರೆಸಲಿ" ಹೇಳು ನಿಂಗೆ ಇಂತ ಕಷ್ಟ ಬಂದಿದೆಯ ಚೆಪ್ಪು ,ಚೆಪ್ಪು (ಹೇಳು ,ಹೇಳು) ಎಂದು ಭಾಯಿ ತುಂಬಾ ಇಮೋಶನಲ್ ಆಗಿದ್ದರು.

ನಾನು ಏನು ಹೇಳಲಿ,ನನ್ನ ತಲೆಯ ತುಂಬಾ ಕಿಶೋರ್ ತುಂಬಿದ್ದ.ಮೊದಲಿಗೆ ಯಾವುದೂ ಬೋರಿಂಗ್ ಕಥೆ ಹೇಳುತ್ತಾರೆಂದು ನಾನು ನೆಗ್ಲೆಕ್ಟ್ ಮಾಡಿದ್ದೂ,ಬ್ರದರ್ ನೋಡಿದರೆ ಎಂಥ ಇಮೋಶನಲ್ ಸ್ಟೋರಿ ಹೇಳಿ ಬಿಟ್ಟರು.ಸಾಲ ತೆಗೆದುಕೊಂಡು ವಿದ್ಯಾಬ್ಯಾಸ ಮಾಡುವುದು ಕಷ್ಟವೇ ಆದರೆ ಈ ರೀತಿ ಎಲ್ಲವು ಒಟ್ಟೊಟ್ಟಿಗೆ ಬಂದರೆ ಎಂಥವನಾದರೂ ಸೋಲಲೇಬೇಕು.ಕಾಲದ ಆಟದ ಮುಂದೆ ನಮ್ಮದೇನು ಆಟ,ನನ್ನ "ಎಫ್ ಎ .. ಎಲ್" ವಿಷಯವೇ ಮರೆತು ಹೋಯಿತು.ತಲೆಯ ತುಂಬಾ ಕಿಶೋರ್ ನಿಂತಿದ್ದ.

"ಆದರೆ ನಮ್ಮ ಕಿಶೋರ್ ಬಗ್ಗಲಿಲ್ಲ,ಮನೆಗೆ ಫೋನ್ ಮಾಡಿ ಸಮಾಧಾನ ಹೇಳಿದ,ಮಾರ್ಚ್ ಕೊನೆಯ ವಾರದಲ್ಲಿ ಬರ್ತೇನೆ,ಎಲ್ಲದಕ್ಕೂ ಒಂದು ಪರಿಹಾರ ಕಂಡುಹಿಡಿತೇನೆ ಎಂದ.ನನ್ನನ್ನು ಕರೆದು ಹೇಳಿದ, "ಇಪ್ಪ ಚೂಡ್ ಕಣ್ಣ"." ವಿಧಿಗೆ ಸವಾಲು ಹಾಕಿ ಗೆದ್ದವ.ಸತ್ಯ ಧರ್ಮದ ಹಾದಿ ಬಿಟ್ಟು ಎಂದು ಹೋಗಲಿಲ್ಲ.ಮುಂದೆ ೪ ತಿಂಗಳಲ್ಲಿ ವಾವ್ ಮಾಡಿದ ಒಂದೊಂದು ಕೆಲಸಕ್ಕೂ ಭಾರಿ ಅರ್ಥವಿದೆ"

ಪುತ್ತೂರು,ಪುತ್ತೂರು ಹಾ ಪುತ್ತೂರು ಇಳಿಯುವವರು ಬನ್ನಿ,ಕಂಡಕ್ಟರ್ ಸಾಹೇಬರು ಜೋರಾಗಿ ಕರೆದರು.ನಾನು ಎದ್ದು ನಿಂತೆ.ಬ್ರದರ್ ನೀನೇನು ಯೋಚನೆ ಮಾಡಬೇಡ ನೀನು ಪಾಸು ಆಗ್ತಿ,ನಿಂಗೆ ಒಳ್ಳೆ ಭವಿಷ್ಯ ಇದೆ.ಹೋಗಿ ಬಾ ಎಂಜಾಯ್ ಮಾಡು ಎಂದರು.ಭಾಯಿಗೆ ಭೈ ಹೇಳಿದೆ.ಬ್ಯಾಗ್ ಎಲ್ಲ ತೆಗೆದುಕೊಂಡು ಸೀದಾ ಪುತ್ತೂರು ಬಸ್ ಸ್ಟ್ಯಾಂಡ್ ಲ್ಲಿ ಇಳಿದೆ.

ಇಳಿದ ಮೇಲೆ ನೆನಪಾಯಿತು,ಭಾಯಿಯ ಹೆಸರು ಕೇಳಿಲ್ಲ ಎಂದು,ಬಸ್ ಆಗ ತಾನೆ ಹೊರಟಿತ್ತು.ಹಿಂದೆಯೇ ಓಡಿ ಹೋದೆ,ಭಯ್ಯ ನಿಮ್ಮ ಹೆಸರೇನು ಎಂದು ಕೂಗಿ ಕೇಳಿದೆ.ಬ್ರದರ್ ಕಿಟಿಕಿಯಿಂದ ತಲೆ ಹೊರಗೆ ಹಾಕಿ "ಪ್ರವೀಣ್ ಕುಮಾರ್" ಎಂದರು.ಹಾಗೆಯೆ ಟಾಟಾ ಮಾಡಿದರು,ಬಸ್ ಕಾಣುವವರೆಗೂ ನಾನು ಕೈ ಆಡಿಸುತ್ತಲೇ ಇದ್ದೆ.

************************


ವಾಸ್ತವ ಪ್ರಪಂಚಕ್ಕೆ ಬಂದ ಮೇಲೆ ಗೊತ್ತಾಯಿತು,ಓಡುವ ಭರದಲ್ಲಿ ನನ್ನ ಮೊಬೈಲ್ ಬಿದ್ದು,ಈಗ ರೋಡಲ್ಲಿ ಬರಿ ಅವಶೇಷ ಮಾತ್ರ ಇರುವುದು.ಇನ್ನೇನು ಮಾಡುವುದು ಸಿಮ್ ಅನ್ನು ಎತ್ತಿ ಇಟ್ಕೊಂಡೆ.ಕೂಡಲೇ ಕೇರಳ ಸ್ಟೇಟ್ ಬಸ್ ರೆಡಿ ಆಗಿ ನಿಂತಿತ್ತು.ಹತ್ತಿ ಹೊರಟೆ.ಈಗ ಹೊಟ್ಟೆ ಜೋರಾಗಿ ಚುರುಗುಟ್ಟಲು ಶುರು ಮಾಡಿತು.ಬೆಳಗ್ಗೆ ಅವಲಕ್ಕಿ ತಿಂದ ಮೇಲೆ ಏನೂ ತಿಂದಿರಲಿಲ್ಲ.ನಮ್ಮ ಭಾಯಿಯ ಕಥೆಯಲ್ಲಿ ಮೈಮೇಲಿನ ಪ್ರಜ್ಞೆಯೇ ಹೊರಟು ಹೋಗಿತ್ತು.ಈಗ ಒಂದೊಂದಾಗಿ ಗೊತ್ತಾಗಲು ಶುರುವಾಯಿತು.ಬಸ್ ವಿಟ್ಲ ಕಳೆಯಿತು ನಾನು ಕಲಿತ "ಪಿ ಯು ಕಾಲೇಜಿಗೆ" ತಿರುಗುವ ದ್ವಾರ ಅದೇ ಪಡಿಬಾಗಿಲು ಕಳೆಯಿತು.ಇನ್ನು ಜೀವನದಲ್ಲಿ ಅತ್ಯಂತ ಸಂತೋಷದಿಂದ ಕಳೆದ ೧೦ ವರ್ಷಗಳ ನೆನಪು,ಅಡ್ಯನಡ್ಕ ಬಂತು.ಬಸ್ ಹಾಗೆ ಮುಂದೆ ಹೋಯಿತು,ನಾನು ಸಾರಡ್ಕ ಗೇಟಲ್ಲಿ ಇಳಿದೆ.ಅಲ್ಲಿಂದ ಸುಮಾರು ೧ ಕಿಲೋಮೀಟರು ನಡೆಯಬೇಕು ಹಾಗೆ ನಡೆದು ಕೊಲ್ಲಪದವು ದಾಟಿ ಜನ್ಮಭೂಮಿ "ಮಣಿಮುಂಡ" ಬಂತು.ಅಮ್ಮ ನನ್ನನ್ನೇ ಎದುರು ನೋಡ್ತಾ ನಿಂತಿದ್ದರು.ಅವತ್ತು ನಡೆದು ಸುಸ್ತು ಆಗಿತ್ತು,ಸ್ನಾನ ಊಟ ಮಾಡುವಷ್ಟರಲ್ಲಿ ಕಣ್ಣಿಗೆ ನಿದ್ದೆ ಹತ್ತಿತ್ತು.

ಮರುದಿನ ಬೆಳಗ್ಗೆ ಅಮ್ಮ ಕೇಳಲು ಶುರು ಮಾಡಿದರು.ಪರೀಕ್ಷೆ ಹೇಗಿತ್ತು?ಅದು ಹೇಗಾಯಿತು?ಇದು ಹೇಗಾಯಿತು?ಮೊಬೈಲ್ ಎಲ್ಲಿ?ಹೀಗೆ ಒಂದರ ಹಿಂದೆ ಒಂದರಂತೆ ಪ್ರಶ್ನೆಗಳ ಸುರಿಮಳೆಯೇ ಸುರುವಾಯಿತು.ಸದಾ ಮಾತಾಡುತ್ತ ಇದ್ದ,ನನಗು ಮೈಸೂರಲ್ಲಿ ಮೂಕನಾಗಿ ಕುಳಿತು ಭಾರಿ ಕಷ್ಟವಾಗಿತ್ತು,ಅದು ಇದು ಎಲ್ಲ ಹೇಳಿ ಬ್ರದರ್ ಸಿಕ್ಕಿದ್ದು,ಬ್ರದರ್ ಹೇಳಿದ ಕಥೆಗೆ ಉಪ್ಪು,ಮೆಣಸು ಖಾರ ಎಲ್ಲ ಸೇರಿಸಿ ನಾನು ದೊಡ್ಡದಾಗಿ ಹೇಳಿದೆ.ಆದರೆ ಹೇಳ್ತಾ ಹೇಳ್ತಾ ಹೋದ ಹಾಗೆ ನನ್ನಲ್ಲಿ ಪ್ರಶ್ನೆಗಳು ಮೂಡಲು ಪ್ರಾರಂಭವಾದವು.ಹಾಗಾದರೆ ವಿಧಿಗೆ ಸವಾಲು ಹಾಕಿ ಗೆದ್ದವ ಎಂದು ಬ್ರದರ್ ಹೇಳಿದ್ದಾರೆ.ಅಂದರೆ ಕಿಶೋರ್ ಬದುಕಲ್ಲಿ ಯಶಸ್ಸನ್ನು ಸಾಧಿಸಿದ್ದಾನೆ ಎಂದಾಯಿತು.ಹಾಗಾದರೆ ಆ ೪ ತಿಂಗಳ ಅವಧಿಯಲ್ಲಿ ಏನಾಗಿರಬಹುದು?ಸತ್ಯ ಧರ್ಮದ ಹಾದಿಯಲ್ಲೇ ನಡೆದಿದ್ದಾನೆ ಎಂಬುದು ಭಾಯಿಯ ಮಾತಿಂದ ಗೊತ್ತಾಗಿದೆ.ಈ ಹುಳ ಯಾವಾಗ ತಲೆಗೆ ಹೊಕ್ಕಿತೋ ಅಲ್ಲಿಂದ ಮುಂದೆ ಒಂದೊಂದು ಹೊತ್ತು ಕಳೆಯುವುದು ಭಾರಿ ಕಷ್ಟವಾಯಿತು.ಅದೇ ವೇಳೆಗೆ ನನ್ನ ಕ್ಲಾಸ್ಮೇಟ್,ಫ್ರೆಂಡ್ ಪ್ರವೀಣ್ ಕಾಲ್ ಮಾಡಿ ಹೇಳಿದ "ಹೇಯ್ ಒಂದು ೧೫ ಜನರನ್ನು ಫೈಲ್ ಮಾಡ್ತಾರಂತೆ ಅದಕ್ಕೆ ಪೇಪರ್ ಅಷ್ಟು ಕಷ್ಟ ಕೊಟ್ಟಿದ್ದು" ಎಂದ.ಅಮ್ಮನ ಹತ್ತಿರ ಎಷ್ಟೇ ಪರೀಕ್ಷೆ ಸುಲಭವಿದೆ ಎಂದರು ನನ್ನ ಒಳಮನಸ್ಸು ಮಾತ್ರ ಫುಲ್ ಹೆದರಿಯೇ ಹೋಗಿತ್ತು.ಮರುದಿನ ೧೭ ಚಿಕ್ಕಪ್ಪನ ಎಂಗೇಜ್ಮೆಂಟ್ ಫುಲ್ ಗೌಜಿ,ಎಲ್ಲ ಚಿಕ್ಕಪ್ಪಂದಿರು,ಚಿಕ್ಕಮ್ಮಂದಿರು ನೆಂಟರಿಷ್ಟರು ಎಲ್ಲರು ಸಿಕ್ಕಿದರು.ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಮದುಮಗ ಅಂದರೆ ನನ್ನ ಚಿಕ್ಕಪ್ಪ ಸಿಕ್ಕಿದರು,ಅವರ ಜೊತೆಗೆ ಒಂದೊಂದು ನಿಮಿಷ ಕಳೆಯುವುದು ಎಂದರೆ ನನಗೆ ಅದು ಬಹಳ ಆನಂದ.ಇತ್ತೀಚಿಗೆ ನಾನು ಅವರು ಒಟ್ಟಾಗಿ ಸಿಗುವುದು ಬಹಳ ಅಪರೂಪವಾಗಿತ್ತು.ಅವರ ಜೊತೆ ಮಾತಾಡಿ ಹೊರಡಬೇಕಾದರೆ ಅಯ್ಯೋ ಹೊರಡಬೇಕಲ್ಲ ಎಂದೆನಿಸುತ್ತದೆ.

ಮರುದಿನ ಚಿಕ್ಕಪ್ಪ ಹೊರಟರು,ನಂಗೂ ಮನದಲ್ಲಿ ಹೆದರಿಕೆ ಜೋರಾಗಲು ಸುರುವಾಯಿತು.ಮರುದಿನ ನಾನೂ ಹೊರಟೆ.ಇಲ್ಲಿ ಮೈಸೂರಿಗೆ ಬರಬೇಕಾದರೆ ರಾತ್ರಿ ಬಸ್ ಲ್ಲಿ ಬಂದೆ.ಇನ್ನು ಯಾರಾದರು ಮಾತಾಡಲು ಸಿಕ್ಕಿ ಇನ್ನೊಂದು ಅರ್ಧ ಸ್ಟೋರಿ ಆಗೋದು ಬೇಡಾಂತ.ಇಲ್ಲಿ ಬಂದರೆ ನನ್ನ ರೂಂ ಮೇಟ್ ಊರಿಗೆ ಹೋಗಿದ್ದ,ಚಿನ್ಮಯ್ ಯು ಇರಲಿಲ್ಲ.ನಾನು ಮನೆಯಲ್ಲಿದ್ದುದು ಬರಿ ೪ ದಿನ.ಮಂಗಳವಾರ ಬೆಳಗ್ಗೆ ನಾನು ಮೈಸೂರಲ್ಲಿ ಅಂದರೆ ಜನವರಿ ೧೯ಕ್ಕೆ .ಇಲ್ಲಿ ಒಬ್ಬನೇ ಕೂತರೆ ಆ ಹಾಳಾದ ಕಥೆಯೇ ನೆನಪಾಗುತ್ತಿತ್ತು.ಏನಾಗಿರಬಹುದು?ಇದನ್ನು ಭೇದಿಸಲೇ ಬೇಕು ಎಂದು ಮನದಲ್ಲೇ ತೀರ್ಮಾನಿಸಿದೆ.ಕೆಲವೊಂದು ಮಾಹಿತಿಗಳು ಮಾತ್ರ ನನ್ನಲ್ಲಿ ಲಭ್ಯವಿದ್ದವು.

ಮೊದಲನೆಯದು ಬ್ಯಾಚ್ ೧೯೯೮-೨೦೦೨.ಮೊದಲು ಬ್ರದರ್ ಹೇಳಿದ ವ್ಯಕ್ತಿಗಳೆಲ್ಲ ಇದ್ದರೋ ಇಲ್ಲವೋ ಎಂದು ಪತ್ತೆ ಹಚ್ಚಬೇಕು.ಇಲ್ಲ ಇದು ಬರಿ ಕಥೆ ಆದರೆ ಹಾಗಿರುವ ವ್ಯಕ್ತಿಗಳು ಈ ಬ್ಯಾಚಲ್ಲಿ ಇರಲು ಸಾಧ್ಯವಿಲ್ಲ.ಅದಕ್ಕೆ ಚಿನ್ಮಯ್ ಹೆಲ್ಪ್ ತೀರ ಅಗತ್ಯ.ಡಿಪಾರ್ಟ್ಮೆಂಟ್ ಸೈಡಿಂದ ಸಹಾಯ ಸಿಗಬೇಕಾದರೆ ಅದು ಚಿನ್ಮಯ್ ಯಿಂದ ಮಾತ್ರ ಸಾಧ್ಯ.ಚಿನ್ಮಯ್ ಬರುವುದು ಬರುವ ರವಿವಾರ ಅಂದರೆ ಜನವರಿ ೨೪ ಅಲ್ಲಿಯವರೆಗೂ ಏನು ಸಾಧ್ಯವಿಲ್ಲ.ಮಂಗಳವಾರದಿಂದ ರವಿವಾರದವರೆಗೆ ಒಂದೊಂದು ದಿನ ಕಳೆಯುವುದು ಒಂದೊಂದು ಯುಗ ಕಳೆದಂತಾಯಿತು.೨೫ ಕ್ಕೆ ರಿಸಲ್ಟ್ ,ಪಾಸು ಫೈಲೋ ಏನೋ ಒಂದು ಗೊತ್ತಾಗಲೇ ಬೇಕು,ಪುನಃ ಪುಸ್ತಕ ಹಿಡಿಯುವ ಹಾಗೂ ಇಲ್ಲ ಬಿಟ್ಟು ಧೈರ್ಯದಿಂದ ಇರುವ ಹಾಗೂ ಇಲ್ಲ.

೨೪ ಸಂಜೆ ಚಿನ್ಮಯ್ ಬಂದ.ಒಂದೇ ಉಸಿರಲ್ಲಿ ಎಲ್ಲ ಕಥೆ ಹೇಳಿ ಮುಗಿಸಿದೆ.ನಾನು ನನ್ನ ಕೆಲಸಕ್ಕೆ ಚಿನ್ಮಯ್ ಮೆಚ್ಚುಗೆ ವ್ಯಕ್ತ ಪಡಿಸುತ್ತಾನೆ ಎಂದು ಕೊಂಡಿದ್ದೆ.ಆದರೆ ಚಿನ್ಮಯ್ ಒಂದೇ ಮಾತಲ್ಲಿ ಹೇಳಿದ "ರವಿಶಂಕರ ನಿಮಗೆ ಹುಚ್ಚು ಹಿಡಿದಿದೆ ,ನಾ ಹೇಳ್ತೀನಲ್ಲ,ಆ ನೀವು ಯಾವುದೊ ಕಥೆ ಬರೀತಿದ್ರಲ್ಲ ಸುಮ್ಮಗೆ ಅದನ್ನು ಮುಂದುವರೆಸಿ,ಈ ಯಾರೋ ಕಥೆ ಹೇಳಿದ್ರು ನೀವು ಅದು ನಿಜಾನ ಸುಳ್ಳ ಅಂತ ಹುಡುಕಲು ಹೊರಟಿದ್ದೀರಿ,ಹೇ ಸುಮ್ಕ್ರಿ ನಿಮಗೆ ಮಾಡೋಕೆನು ಬೇರೆ ಕೆಲಸ ಇಲ್ಲ,ಬಹಳ ಬೇಗ ಬಂದಿದ್ದೀರಿ ಒಬ್ಬರೇ ಬೇರೆ ಇದ್ದೀರಿ ಅದಕ್ಕೆ ಹೀಗಾಗಿದೆ,ಒಂದು ೪ ದಿನ ಊರಲ್ಲಿ ಆರಾಮವಾಗಿ ಇದ್ದು ಬರಬಾರದಾಗಿತ್ತ"ಎಂದರು .ಒಮ್ಮೆ ನಂಗು ಸರಿ ಅನ್ನಿಸಿತು,ಆದರೆ ಮನಸ್ಸು ಕೇಳಲಿಲ್ಲ,ಚಿನ್ಮಯ್ ಕೇಳಿದ್ರೆ ಒಪ್ತಾನೆ,ಅವನಿಂದ ಆದ ಸಹಾಯ ಮಾಡ್ತಾನೆ ಅಂತ ನಂಗೆ ಗೊತ್ತಿತ್ತು,ಯಾಕೆಂದರೆ ಕಳೆದ ೨ ವರ್ಷಗಳಿಂದ ನಾವು ೩ ಜನ ಇಲ್ಲಿ ಒಂದೇ ಪಿ ಜಿ ಯಲ್ಲಿ ಇದ್ದೇವೆ.

ಮರುದಿನ ರಿಸಲ್ಟ್,ಬೆಳಗ್ಗೆಯೇ ಟೆನ್ಶನ್ ಏರಲು ಶುರುವಾಯಿತು.ಇಡೀ ದಿನ ರಿಸಲ್ಟ್ ಗಾಗಿ ಕಾದೆವು,ನನ್ನ ರೂಂ ಮೇಟ್ ಕಾರ್ತಿಕ್ ಬೆಳಗ್ಗೆಯೇ ಊರಿಂದ ಬಂದಿದ್ದ.೩ ಜನ ಕಂಪ್ಯೂಟರ್ ಮುಂದೆ ಕೂತು ಕಾಲೇಜು ವೆಬ್ ಸೈಟ್ ಹಾಕಿ ರೆಫ್ರೆಶ್ ಮಾಡಿದ್ದೂ ಮಾಡಿದ್ದೆ,ಹೂ೦ ರಿಸಲ್ಟ್ ಮಧ್ಯಾನ್ನದವರೆಗೆ ಬರಲೇ ಇಲ್ಲ.ಮಧ್ಯಾನ್ನ ಮೇಲೆ ರಾಘವೇಂದ್ರ ರೂಮಿಗೆ ಬಂದ,ಆ ಕಡೆ ಪ್ರವೀಣ್ ಅವನ ರೂಮಿಗೆ ಬಂದ,ಎಲ್ಲರು ರಿಸಲ್ಟನ್ನು ಕಾತರದಿಂದ ಕಾಯುತ್ತಿದೆವು.ಕೊನೆಗೆ ೫ ೩೦ ಗೆ ರಿಸಲ್ಟ್ ಹೊರ ಬಿತ್ತು.ಎಲ್ಲರು ಎಲ್ಲ ಕಡೆ ಒಟ್ಟಿಗೆ ರಿಸಲ್ಟ್ ಗಾಗಿ ಸೈಟ್ ಮುಂದೆ ಕೂತಿದ್ದರು ಅಂತ ಕಾಣುತ್ತೆ.ಎಷ್ಟು ಪ್ರಯತ್ನ ಪಟ್ಟರು ಓಪನ್ ಆಗಲಿಲ್ಲ.ಪ್ರವೀಣ್ ಒಬ್ಬನಿಗೆ ಓಪನ್ ಆಯಿತು.ಅವನು ಫೋನ್ ಮಾಡಿ ನಮ್ಮ ಎಲ್ಲರ ರಿಸಲ್ಟ್ ಹೇಳಿದ.ಆ "ಪಿ ಡಿ ಎಫ್" ಫೈಲನ್ನು ಚಿನ್ಮಯ್ ಗೆ ಮೇಲ್ ಮಾಡಿದ.ಸರಿ "ಸಿ ಅರ್"ಗೆ ಒಂದರ ಹಿಂದೆ ಒಂದರಂತೆ ಕಾಲ್ ಗಳು ಬರಲು ಶುರುವಾದವು.ನಂಗೆ ನಾನು ಪಾಸು ಅಂತ ಅದಮೇಲೆ ಬೇರೇನೂ ನೋಡಲೇ ಹೋಗಲಿಲ್ಲ,ಭಾರಿ ಕುಶಿಯಾಯಿತು.ಎಲ್ಲರಿಗು ಚೆನ್ನಾಗಿ ಅಂಕ ಬಂದಿದ್ದವು.

ಇನ್ನೂ ಕ್ಲಾಸ್ ಶುರುವಾಗಲು ೧ ವಾರ ಟೈಮ್ ಇದೆ ,ಕಾರ್ತಿಕ್ ಸೀರಿಯಸ್ ಆಗಿ ಗೇಟ್ ಪರೀಕ್ಷೆಗೆ ಓದುತ್ತಿದ್ದ.ನನಗೆ ಬೇರೇನೂ ಕೆಲಸವಿರಲಿಲ್ಲ.ನಾನು ಮತ್ತೆ ನನ್ನ ಡಿಟೆಕ್ಟಿವ್ ಕಾರ್ಯ ಶುರು ಮಾಡಿದೆ..ನಾನು ಬಿಡಲಿಲ್ಲ,ಚಿನ್ಮಯ್ ಮೂಲಕ ಡಿಪಾರ್ಟ್ಮೆಂಟ್ ನಲ್ಲಿ ಇರೋ ರೆಜಿಸ್ಟರ್ ಬುಕ್ ನ್ನು ತೆಗೆದು ನೋಡಿದೆ.ಎಲ್ಲ ಹೆಸರುಗಳು ಹಾಗೆ ಇದ್ದವು.ಅಂದರೆ ಪ್ರವೀಣ್ ಭಾಯಿ ಹೇಳಿದ್ದು ಸುಳ್ಳಲ್ಲ.ನಡೆದ ಘಟನೆಯೇ.ನನ್ನ ನಂಬಿಕೆ ದೃಢವಾಯಿತು.ಚಿನ್ಮಯರೇ ಯಾರದ್ದಾದರೂ ಫೋನ್ ನಂಬರ್ ಸಿಗಬಹುದ ಎಂದೇ."ನೀವೊಳ್ಳೆ ರವಿಶಂಕರ ಇಲ್ಲೇನು ಫೋನ್ ನಂಬರ್ ಬರೆದು ಹೋಗ್ತಾರ,ಅಥವಾ ಸಿಕ್ಕಿದರು ಅವರೇನು ಈಗಲೂ ಅದೇ ಫೋನ್ ನಂಬರ್ ಯೂಸ್ ಮಾಡ್ತಾರ ನಾ ಹೇಳ್ತೀನಲ್ಲ,ಇದೆಲ್ಲ ಆಗಲ್ಲ,ಸುಮ್ಮನೆ ಬಿಟ್ಟುಬಿಡಿ" ಎಂದರು.ಆದರು ನಾನು ನನ್ನ ಪ್ರಯತ್ನ ಬಿಡಲಿಲ್ಲ,ಬೆಳ್ಳಾರೆಯಲ್ಲಿ ನಮಗೊಬ್ಬರು ದೂರದ ಸಂಭಂದಿಕರು ಇದ್ದಾರೆ,ಅವರಿಗೆ ಫೋನ್ ಮಾಡಿದೆ.ದೊಡ್ಡ ಅಂಕಲ್ ಅಂದರೆ ಈಶ್ವರ ಮಾವ ಫೋನ್ ಎತ್ತಿದರು.ನಂಗೆ ಕಥೆ ಹೇಳುವಷ್ಟು ,ಅದನ್ನು ಅವರು ಕೇಳುವಷ್ಟು ಸಮಯ ಫೋನಲ್ಲಿ ಮಾತಾಡುವುದು ವೇಸ್ಟ್,ನೇರವಾಗಿ ವಿಷಯಕ್ಕೆ ಬಂದೆ,ಕಿಶೋರ್ ಅನ್ನುವವರನ್ನು ಗೊತ್ತ, ಬಾಳೆತೋಟದಲ್ಲಿ ಮನೆ,೮ ವರ್ಷದ ಹಿಂದೆ ಜೆ ಸಿ ಕಾಲೇಜು ಮೈಸೂರಲ್ಲಿ ಇಂಜಿನಿಯರಿಂಗ್ ಮಾಡಿದ್ದು ಎಂದೆ."ಇಲ್ಲ " ಯಾಕೆ? ಎಂಬ ಪ್ರಶ್ನೆ ಬಂತು,ಇಲ್ಲ ಎಂಬಾಗಲೇ ನನ್ನ ಉತ್ಸಾಹ ಇಳಿದಿತ್ತು.ಮತ್ತೆ ಹೇಗೋ ಹಾಗೆ ಹೀಗೆ ಮಾತಾಡಿ ವಿಷಯ ತಪ್ಪಿಸಲು ನೋಡಿದೆ, ಹೂ೦ ಏನು ಪ್ರಯೋಜನವಾಗಿಲ್ಲ,ಯಾಕೆಂದರೆ ಎಂದೂ ಕಾಲ್ ಮಾಡದವ ನಾನು ಹೀಗೆ ಒಮ್ಮೆಲೇ ಏಕಾಏಕಿ ಕಾಲ್ ಮಾಡಿ ಅವರು ಗೊತ್ತ ಎಂದರೆ ಅವರಿಗೂ ಅನುಮಾನ ಬಂತು.ಮತ್ತೆ ಏನು ಮಾಡುವುದು ನಾನು ಒಂದು ಸುಳ್ಳು ಹೇಳಬೇಕಾಯಿತು,ಅವರದ್ದು ಹಿಂದೆ ಮಾಡಿದ್ದ ಪ್ರಾಜೆಕ್ಟ್ ಮೊನ್ನೆ ಲೈಬ್ರರಿಯಲ್ಲಿ ನೋಡುವಾಗ ಸಿಕ್ಕಿತು,ಹಾಗೆ ನಮ್ಮೂರು ಅಂತ ಗೊತ್ತಾಯಿತು,ಹಾಗೆ ನಿಮಗೆ ಗೊತ್ತಿದೆಯ ಎಂದು ಕೇಳುವ ಎಂದು ಮಾಡಿದ್ದು,ಗೊತ್ತಾದ್ರೆ ನಂಗೆ ಅವರ ಫೋನ್ ನಂಬರ್ ತಿಳಿಸಿ,ನಾನು ಈಗ ೬ ಸೆಮ್ ಮುಂದೆ ಪ್ರಾಜೆಕ್ಟ್ ಗೆ ಏನಾದ್ರು ಹೆಲ್ಪ್ ಆಗಬಹುದು ಎಂದೆ.ಅವರ ಮನಸ್ಸಿಗೂ ಸಮಾಧಾನವಾಯಿತು.ನಾನು ಅಪಾಯದಿಂದ ತಪ್ಪಿಸಿಕೊಂಡೆ.

ಮನೆಗೆ ಕಾಲ್ ಹೋಯಿತು,"ಮಗ ತೊಂದರೆ ಇಲ್ಲೇ ಮಾರಾಯ,ಮುಂದಿನ ವರ್ಷದ ಪ್ರಾಜೆಕ್ಟ್ ಗೆ ಈಗಲೇ ಸಿದ್ದತೆ ಮಾಡ್ತಿದ್ದಾನೆ,ನಮ್ಮ ಇಲ್ಲೇ ಬಾಳೆತೋಟದ ಯಾರೋ ಕಿಶೋರ್ ಅಂತೆ,ಅವನ ಬಗ್ಗೆ ಗೊತ್ತಾದರೆ ,ಅವನ ನಂಬರ್ ಸಿಕ್ಕರೆ ಕೊಡಿ ಎಂದಿದ್ದಾನೆ " ಎಂದು ಈಶ್ವರ ಮಾವ ನಮ್ಮ ತಂದೆಗೆ ಹೇಳಿದರು.ತಂದೆಗೂ ಖುಷಿಯಾಯಿತು,ಮನೆಯಲ್ಲಿ ಅಮ್ಮನ ಹತ್ರ ಹೇಳಿದರು.ಅಮ್ಮನಿಗೆ ಯಾಕೋ ಹೆಸರು ಕೇಳಿದಾಗ ಡೌಟ್ ಬಂತು.ಮರುದಿನ ನಂಗೆ ಕಾಲ್,ನೀನು ಮೈಸೂರಿಗೆ ಬೇಗ ಹೋಗಿ ಮಾಡಿದ್ದು ಇದನ್ನ,ನಿನಗೆ ಅಂದೇ ಹೇಳಿಲ್ಲ,ಕಥೆಯನ್ನು ಎಲ್ಲ ಅಲ್ಲಿಗೆ ಬಿಡು,ನೀನು ಇದನ್ನೇ ಮಾಡು ಆಯ್ತಾ,ಅಪ್ಪ ನೀನೇನೋ ಪ್ರಾಜೆಕ್ಟ್ ಮಾಡ್ತಾ ಇದ್ದಿ ಅಂತ ಕುಶಿಯಲ್ಲಿದ್ದಾರೆ ಎಂದು ಜೋರು ಮಾಡಿದರು.ನಾನು ಅಮ್ಮನಿಗೆ ಸಧ್ಯಕ್ಕೆ ಅಪ್ಪನಿಗೆ ಈ ವಿಷಯ ಹೇಳುವುದು ಬೇಡ,ಇನ್ನು ಮುಂದೆ ಇದನ್ನು ಕುರಿತು ಅನ್ವೇಷಣೆ ಮಾಡುವುದಿಲ್ಲ ಎಂದು ಹೇಳಿ ಸಮಾಧಾನ ಪಡಿಸಿದೆ.ಆದರೆ ಇಟ್ಟ ಹೆಜ್ಜೆ ಹಿಂದೆ ತೆಗೆಯಲು ಮನಸ್ಸು ಬರಲಿಲ್ಲ.

"ಪಿ ಎಂ ಎಸ್" ಸರ್ ೨೦೦೨ ರಲ್ಲಿ ಸೇರಿದ್ದು,ಅವರು ಯಾವುದೊ ಒಂದು ಪ್ರಾಜೆಕ್ಟ್ ಟೀಮಿಗೆ ಗೈಡ್ ಆಗಿದ್ದರು,ಎಂದು ತಿಳಿಯಿತು.ಸರಿ ಇದೊಂದೇ ಲಾಸ್ಟ್ ಚಾನ್ಸ್ ಕೇಳಿ ನೋಡೋಣ ಸಿಕ್ಕಿದರೆ ಆಯಿತು,ಇಲ್ಲವಾದರೆ ಇದನ್ನು ಇಲ್ಲಿಗೆ ಬಿಡುವ ಎಂದು ನಿರ್ಧರಿಸಿದೆ. ಯಾಕೆಂದರೆ ಸರ್ ಎಲ್ಲರ ಪ್ರಾಜೆಕ್ಟ್ ಅನ್ನು ಡಿ ವಿ ಡಿ ಮಾಡಿ ತೆಗೆದು ಇಟ್ಟುಕೊಳ್ಳುತ್ತಾರೆ ಜೊತೆಗೆ ಅವರ ಕಾಂಟಾಕ್ಟ್ ನಂಬರ್ ಸಹ ಆ ಡಿ ವಿ ಡಿ ಯಲ್ಲಿ ಇರುತ್ತೆ. ಸರ್ ಹುಡುಗರು ಮಾಡಿದ ಕೆಲಸವನ್ನು ಮತ್ತು ಅವರ ಕಾಂಟಾಕ್ಟ್ ಅನ್ನು ಇಟ್ಟುಕೊಳ್ಳುತ್ತಾರೆ ಎಂದು ಯಾರೋ ಹೇಳಿದರು.ಸರಿ ಹೋದೆ,ಸರ್ ೨೦೦೨ ರಲ್ಲಿ ನಿಮ್ಮ ಕೆಳಗೆ ಪ್ರಾಜೆಕ್ಟ್ ಮಾಡಿದ್ದವರು ಬಹಳ ಚೆನ್ನಾಗಿ ಮಾಡಿದ್ದರಂತೆ ನಮ್ಮ ಒಬ್ಬರು ಅಣ್ಣ ಹಿಂದೆ ಇಲ್ಲಿ ಓದಿದ್ದರು ಅವರು ಹೇಳಿದರು.ಸರ್ ನಿಮ್ಮ ಹತ್ರ ಡಿ ವಿ ಡಿ ಇದೆ ಅಂತಲ್ಲ ಒಮ್ಮೆ ರೆಫೆರೆನ್ಸೆಗೆ ನೋಡಬಹುದ ಎಂದು ಕೇಳಿದೆ.ಸರ್ ಯಾವತು ಅಂತ ವಿಷಯಗಳಲ್ಲಿ ಸದಾ ಮುಂದೆ ಕೂಡಲೇ ಕಪಾಟಿನ ಲೋಕ್ ತೆಗೆದು ಹುಡುಕಿ ಕೊಟ್ಟರು.ಥ್ಯಾಂಕ್ಸ್ ಸರ್,ನಾಳೆ ಕೊಡ್ತೇನೆ ಎಂದೆ.ಅದೇನು ಅರ್ಜೆಂಟ್ ಇಲ್ಲ,ನಿಧಾನಕ್ಕೆ ನೋಡಿ,ಅವರು ಏನು ಮಾಡಿದ್ದರೆ ಅಂತ ನಂಗೆ ಮರೆತು ಹೋಗಿದೆ,ಆದರೆ ಫಸ್ಟ್ ಬ್ಯಾಚ್ ನವರು ಬಹಳ ಚೆನ್ನಾಗಿ ಮಾಡಿದ್ದಾರೆ ಎಂದರು.

ರೂಮಿಗೆ ಬಂದವನೇ ಮೊದಲು ಡಿ ವಿ ಡಿ ಹಾಕಿ ನೋಡಿದೆ,ಎಲ್ಲ ಕರೆಕ್ಟ್ ಆಗಿತ್ತು.೪ ಹೆಸರುಗಳು ಸಿಕ್ಕಿದವು.ಕಾಂಚನ,ಸೌಮ್ಯ,ಅನುಷ್ಕ,ತನುಷ್ಕ.ಎಬ್ಬ ಪ್ರವೀಣ್ ಭಾಯಿ ನೀ ಯಾಕಾರೋ ಬಸಲ್ಲಿ ಸಿಕ್ಕಿದೆ ಅನ್ಸಿತು.ಎಲ್ಲರ ಕಾಂಟಾಕ್ಟ್ ನಂಬರ್ ಇದ್ದವು.ಒಂದೊಂದಾಗಿ ಕಾಲ್ ಮಾಡ್ತಾ ಹೋದೆ.೩ ಮೊಬೈಲ್ ನಂಬರ್ ಗಳು ಸ್ವಿಚ್ ಆಫ್ ಆಗಿತ್ತು.ಕೊನೆಗೆ ಅನುಷ್ಕ ನಂಬರ್ ಮಾತ್ರ ರಿಂಗ್ ಆಯಿತು.ನಾನು ಮಾಡಿದ್ದು ಮಧ್ಯಾನ್ನ ೨ ೩೦ ಕ್ಕೆ .ಕಾಲ್ ರಿಸಿವ್ ಮಾಡಲೇ ಇಲ್ಲ.ಮತ್ತೆ ಸಂಜೆ ೬ ಗಂಟೆಗೆ ಟ್ರೈ ಮಾಡಿದೆ.ಎತ್ತಿದರು ಹೆಲೋ ಮೇಡಂ ನಾನು ರವಿಶಂಕರ,ಮೈಸೂರಿಂದ ಎಂದು ಹೇಳಿ ,ಪ್ರವೀಣ್ ಭಾಯಿ ಬಸ್ಸಲ್ಲಿ ಸಿಕ್ಕಿದ್ದು,ಇಲ್ಲಿ ಹುಡುಕಾಟ ನಡೆಸಿದ್ದು,"ಪಿ ಎಂ ಎಸ್" ಸರ್,ಎಲ್ಲ ವಿಷಯ ಹೇಳಿದೆ.ಅವರಿಗೂ ಕಲಿತ ಕಾಲೇಜಿನ ನೆನಪು ಬಂತು ಅಂತ ಕಾಣಿಸುತ್ತೆ,ಅವರು ಈಗ ಪುತ್ತೂರಿನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಲೆಕ್ಚರ್ ಆಗಿದ್ದಾರೆ,ಹಾಗಾಗಿ ಅವರು ಮಧ್ಯಾನ್ನ ಕಾಲ್ ರಿಸಿವ್ ಮಾಡಿಲ್ಲ.ಆಮೇಲೆ ಕಿಶೋರ್ ಬಗ್ಗೆ ಗೊತ್ತ ಮೇಡಂ ಅಂದೆ.ಅವರು ಎಲ್ಲರು ಒಳ್ಳೆ ಕಂಪೆನಿಯಲ್ಲೇ ಪ್ಲೇಸ್ ಆಗಿದ್ದರು.ಅವರು ೧೦ ಜನ ಬೇರೆ ಬೇರೆ ಕಡೆ ಹೋಗಿದ್ದರು,"ಚೆನ್ನ ದೇವರು" ಒಬ್ಬರು ಅವರ ಗ್ರೂಪಲ್ಲಿ "ಐ ಎ ಎಸ್ " ಮಾಡಿ ಎದ್ಮಿನಿಸ್ತ್ರೆತಿವ್ ಕಡೆಗೆ ಹೋಗಿದ್ದರು,ನನಗೆ ಲೆಕ್ಚರ್ ಆಗಬೇಕೆಂಬುದು ಮಹದಾಸೆಯಾಗಿತ್ತು ಹಾಗಾಗಿ ಶಿಕ್ಷಣ ಕ್ಷೇತ್ರ ಆಯ್ದುಕೊಂಡೆ ಎಂದರು.ಮೇಡಂ ಈಗ ಲೇಟೆಸ್ಟ್ ಏನಾದರು ಗೊತ್ತ ಎನ್ನಲು ಇಲ್ಲಪ್ಪ ಈಗ ಅಷ್ಟು ಕಾಂಟಾಕ್ಟ್ ಇಲ್ಲ,ಯಾರೋ ಹೇಳಿದರು ಕಿಶೋರ್ ಮತ್ತು ಪ್ರವೀಣ್ ಸೇರಿ ಬೆಂಗಳೂರಲ್ಲಿ "ಪಿ ಕೆ ಅರ್ " ಇಂಡಸ್ಟ್ರೀಸ್ ಶುರು ಮಾಡಿದ್ದಾರೆ ಅಂತ ಅಂದರು,ಆಮೇಲೆ ೬ ನೆಯ ಸೆಮ್ ಆ ದಿನಗಳ ಬಗ್ಗೆ ಗೊತ್ತಿಲ್ಲ,ಅವರು ಹುಡುಗರು ನಮ್ಮತ್ರ ಎಲ್ಲಿ ಹೇಳುತ್ತಾರೆ ಅಂದರು.ಥ್ಯಾಂಕ್ಸ್ ಮೇಡಂ ಅಂದೆ.

ಅಂದರೆ ನಾನು ಬಸ್ ಲ್ಲಿ ಜೊತೆಗೆ ಕೂತು ಬಂದುದು "ಪಿ ಕೆ ಅರ್ "ಸಮೂಹದ ಮಾಲಿಕ "ಪ್ರವೀಣ್ ಕುಮಾರ್" ಜೊತೆಗೆ,ಎಷ್ಟೊಂದು ಸರಳ,ಸಜ್ಜನ.ನನ್ನ ಒಂದು ಪರೀಕ್ಷೆಯ ಹೆದರಿಕೆ ಎಷ್ಟೊಂದು ಹೊಸ ಲೋಕಕ್ಕೆ ಕರೆದೊಯಿದಿತು.ಛೆ ನಾನು ಅವರ ಮುಂದೆ ಎಷ್ಟೊಂದು ಸಣ್ಣ ಅನಿಸಿತು.ಇಷ್ಟು ಕಂಡು ಹಿಡಿಯುವಷ್ಟರಲ್ಲಿ ಇಷ್ಟು ದಿನವಾಯಿತು.ಕಾಲೇಜು ಶುರುವಾಗಿ ಹಾಗೆಯೇ ಒಂದು ತಿಂಗಳು ಆಗುತ್ತ ಬಂತು.ಇಂಟರ್ನಲ್ಸ್ ಹತ್ತಿರ ಬರ್ತಾ ಇದೆ.ಇನ್ನು ಇದನ್ನೇ ಮುಂದುವರೆಸಿದರೆ ಮತ್ತೆ ಈ ಸಲ ಹೆದರಬೇಕಾದೀತು,ಅದಕ್ಕೆ ಸಧ್ಯಕ್ಕೆ ಇದನ್ನು ಇಲ್ಲೇ ನಿಲ್ಲಿಸುವ ತೀರ್ಮಾನ ಮಾಡಿದ್ದೇನೆ.

ಅದರೂ ಮನದಲ್ಲಿ ಒಂದು ಸಂಶಯ ಇನ್ನೂ ಕಾಡುತ್ತಿದೆ.ಅಂದು ಪ್ರವೀಣ್ ಭಾಯಿ ಹೇಳಲು ಶುರು ಮಾಡಿದ್ದರು.ಮಾರ್ಚ್ ಕೊನೆಯ ವಾರದಲ್ಲಿ ಕಿಶೋರ್ ಮನೆಗೆ ಬರ್ತೇನೆ ಎಂದು ತಂದೆಗೆ ತಿಳಿಸಿದ್ದ,ಅವನು ಆ ಸುಳಿಯಿಂದ ಹೊರಗೆ ಹೇಗೆ ಬಂದ,ಆ ೪ ತಿಂಗಳಲ್ಲಿ ಏನಾಯಿತು ಎಷ್ಟು ಯೋಚನೆ ಮಾಡಿದರು ಉತ್ತರ ಹೊಳಿತಾ ಇಲ್ಲ,ಮಿತ್ರರೇ ನಿಮಗೇನಾದರೂ ಗೊತ್ತಾದರೆ ದಯವಿಟ್ಟು ಇಲ್ಲಿ ತಿಳಿಸಿ.ಯಾಕೆಂದರೆ ನನ್ನ ಪರಿಸ್ಥಿತಿ "ಎಪ್ಪುಡಿ ಉಸ್ತಾನೋ ನಾಕೆ ತೆಲೀದು" ಎಂಬಂತಾಗಿದೆ.

Thursday, February 11, 2010

ಹೋರಾಟದ ಹಾದಿ



ಮದುವೆ,ಗ್ರಹಪ್ರವೇಶ ಎಲ್ಲ ಅದ್ದೂರಿಯಾಗಿ ನಡೆಯಿತು.ಬಂದ ನೆಂಟರಿಷ್ಟರು,ಬಂಧುಗಳು ಒಬ್ಬೊಬ್ಬರಾಗಿ ಚದುರತೊಡಗಿದರು. ರಾಯರ ಮನದಿಂದಲೂ ಹಿಂದೆ ನಡೆದ ಕಹಿ ಘಟನೆಗಳು,ಮಾಯವಾಗತೊದಗಿದವು.ಹೊಸ ಹೊಸ ಭಾವನೆಗಳಿಗೆ,ಕನಸಿಗೆ ಪ್ರೇರಣೆಯಾಗಿ ಈಗ ಸಂಧ್ಯಾ ಜೊತೆಗಿದ್ದಳು.ಸುಮಾರು ೧೫ ದಿನ ಊರಲ್ಲಿ ಇದ್ದು ಸಮ್ಮಾನ,ನೆಂಟರಿಷ್ಟರ ಮನೆಗೆ ಹೋಗಿ ಬಂದರು.ಬ್ರಹ್ಮರಾಯರಂತು ಈಗ ತುಂಬಾ ನಿರಾಳರಾದವರಂತೆ ಕಂಡು ಬಂದರು.ಅವರ ಮುಖದಲ್ಲಿ ಏನೋ ಒಂದು ಮಂದಹಾಸ ಎದ್ದು ಕಾಣಿಸುತ್ತಿತ್ತು.ರಾಯರ ತಾಯಿಯಂತೂ ತನಗೆ ಒಬ್ಬಳು ಮಗಳಿದ್ದರೆ ಹೇಗೆ ನೋಡುತ್ತಿದ್ದರೋ ಅದಕ್ಕಿಂತ ಹೆಚ್ಚಿನ ಪ್ರೀತಿ ಸೊಸೆಯ ಮೇಲೆ ತೋರಿದರು.

ರಾಯರ ಜೊತೆಯಲ್ಲಿಯೇ ಅವರ ಮಿತ್ರ ಪ್ರಸನ್ನರಿಗೂ ಕೂಡ ಮದುವೆಯಾಯಿತು.ರಾಯರದು ಜೂನ್ ೨೨ಕ್ಕೆ ನಡೆದರೆ ಪ್ರಸನ್ನರದು ಜೂನ್ ೩೦ಕ್ಕೆ ಒಂದೇ ವಾರ ಅಂತರ,ಮರುವಾರದಲ್ಲಿಯೇ ಇನ್ನೊಬ್ಬರು ಮಿತ್ರ ಪ್ರಸಾದರಿಗೆ ಮದುವೆ.ಹೀಗೆ ಎಲ್ಲ ಮಿತ್ರರು ಸುಮಾರು ೧ ತಿಂಗಳು ಕಂಪೆನಿಗೆ ರಜೆ ಹಾಕಿದ್ದರು.

ಸಂಧ್ಯಾ ಳಿಗೆ ಮಾತು ಬಹಳ ಕಡಿಮೆ.ಅವಳು ಯಾವತ್ತೂ ಇನ್ನೊಬ್ಬರ ಬಗ್ಗೆ ಮಾತಾಡುತ್ತಿರಲಿಲ್ಲ.ಅವರು ಹಾಗೆ,ಇವರು ಹೀಗೆ ಎಂದು ಎಂದೂ ದೂರಿದ್ದಿಲ್ಲ,ಅವರಿವರ ಬಗ್ಗೆ ಮಾತಾಡಿ ಏನಾಗಬೇಕು ಎಂಬುದು ಅವಳ ಅಭಿಮತ.ಸಾಮಾನ್ಯವಾಗಿ ಮನುಷ್ಯರು ಅವರಿವರ ಬಗ್ಗೆ ಮಾತಾಡಿಯೇ ತಮ್ಮ ಆಯುಷ್ಯ ಕಳೆಯುತ್ತಾರೆ.ಇನ್ನೊಬ್ಬರ ಬಗ್ಗೆ ಮಾತಾಡದಿದ್ದರೆ ಮಾತುಗಳು ಎಷ್ಟು ಕಡಿಮೆಯಾಗುತ್ತವೆ ಎಂದು ರಾಯರು ಅರಿತರು.ರಾಯರಿಗೆ ಹೇಳಿ ಮಾಡಿಸಿದ ಜೋಡಿ.

ರಾಯರು ತಮ್ಮ ಪತ್ನಿಯ ಜೊತೆಗೆ ಬೆಂಗಳೂರಿಗೆ ಬಂದರು.ಸಂದ್ಯಳು ರಾಯರಂತೆ "ಬಿ ಎಸ್ ಸಿ", "ಎಂ ಎಸ್ ಸಿ" ಮಾಡಿದ್ದರು.ಆದರೆ ಅವರದು ಸಾಫ್ಟ್ ವೇರ್ ಕ್ಷೇತ್ರ,ರಾಯರದು ಹಾರ್ಡ್ ವೇರ್.ಸಂಧ್ಯಾಳಿಗೆ ಹೊರಗೆ ಕೆಲಸಕ್ಕೆ ಹೋಗಲು ಭಾರಿ ಆಸಕ್ತಿ ಏನು ಇರಲಿಲ್ಲ.ರಾಯರು ಒತ್ತಾಯ ಮಾಡಲಿಲ್ಲ.ಆದರೆ ಆಕೆ ಸದಾ ಚಟುವಟಿಕೆಯಲ್ಲೇ ಇರುವವಳು,ಮನೆಯಲ್ಲಿಯೇ ಕೂತು ಪ್ರಾಜೆಕ್ಟ್ ಮಾಡುತ್ತಿದ್ದರು.ರಾಯರ ಬಹುಕಾಲದ ಕನಸು ಸ್ವಂತ "ವೆಬ್ ಸೈಟ್ " ಮಾಡಬೇಕೆಂಬುದು ನನಸಾಯಿತು.ರಾಯರ ಅಸೆ,ಕನಸಿಗೆ ಅನುಗುಣವಾಗಿ ಸಂಧ್ಯಾ "ವೆಬ್ ಸೈಟ್" ರಚಿಸಿದಳು.

ಸಂಧ್ಯಾ ಳಿಗೆ ದೇವರ ಮೇಲೆ ಅಪಾರ ನಂಬಿಕೆ.ಜಾತಕ,ಜ್ಯೋತಿಷ್ಯದ ಮೇಲೆ ಬಹು ವಿಶ್ವಾಸ.ರಾಯರು ಎಲ್ಲದರಿಂದಲೂ ಸಮ ದೂರದಲ್ಲಿದ್ದರು.ಸಂಧ್ಯಾಲಂತೂ ರಾಯರನ್ನು ಬೆಳಗ್ಗೆಯೇ ಎದ್ದು ದೇವಸ್ತಾನಕ್ಕೆ ಹೋಗಿ ಬರುವಂತೆ ಒತ್ತಾಯಿಸುತ್ತಿದ್ದರು. ರಾಯರು ಯಾವತ್ತು ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುತ್ತಿರಲಿಲ್ಲ.ನನ್ನ ಕೈ ಹಿಡಿದು ಬಂದಿದ್ದಾಳೆ,ಅವಳ ಮನಸ್ಸಿಗೆ ನೋವಾಗದಂತೆ ಎಷ್ಟು ನಡೆಯಲು ಸಾಧ್ಯವೋ ಅಷ್ಟನ್ನು ಮಾಡುವುದು ತಪ್ಪಲ್ಲ ಎಂದು ನಂಬಿದ್ದರು.ಹಾಗಾಗಿ ರಾಯರ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯಾಯಿತು,ಈಗ ರಾಯರು ಬೆಳಗ್ಗೆ ಬೇಗ ಎದ್ದು ದೇವಸ್ತಾನಕ್ಕೆ ಹೋಗುತ್ತಿದ್ದರು.ಯಾವುದು ಒಳ್ಳೆಯದೋ, ಅದರಿಂದ ಕೆಡುಕು ಇಲ್ಲವೋ ಅದನ್ನು ತಾನು ಪಾಲಿಸುವುದರಿಂದ ಏನು ತೊಂದರೆ ಇಲ್ಲ ಮತ್ತು ಅದರಿಂದ ಇನ್ನೊಬ್ಬರಿಗೆ ಸಂತಸ,ನೆಮ್ಮದಿ ದೊರೆಯುವುದಾದರೆ ಅದಕ್ಕೆ ನಾನೇಕೆ ಅಡ್ಡಿ ಪಡಿಸಲಿ ಎಂಬಂತಿದ್ದರು ರಾಯರು.ರಾಯರು ಅಲ್ಲೇ ಮನೆಯ ಪಕ್ಕದಲ್ಲಿಯೇ ಇದ್ದ ಅನಂತಕೃಷ್ಣ ಭಟ್ಟರಲ್ಲಿ ತಾವು ಬಾಲ್ಯದಲ್ಲಿ ಕಲಿತು ಮರೆತಿದ್ದ ಸಂಧ್ಯಾವಂದನೆಯನ್ನು ಪುನಃ ಕಲಿತರು.ಜೊತೆಗೆ ನಿತ್ಯ ಪೂಜೆ ಮಾಡುವ ವಿಧಾನ,ರುಧ್ರವನ್ನು ತಮ್ಮ ೩೦ನೆಯ ವಯಸ್ಸಲ್ಲಿ ಕಲಿತರು.ಕಲಿಕೆಗೆ ಬೇಕಾದ್ದು ಶ್ರದ್ದೆ,ಕಲಿಕೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ತೋರಿಸಿ ಕೊಟ್ಟರು.ಹೀಗೆ ರಾಯರು ದೇವರಿಗೆ ಹತ್ತಿರವಾಗತೊಡಗಿದರು.ಮನೆಯಲ್ಲಿ ಸಂಧ್ಯಾ ವಂದನೆ,ನಿತ್ಯ ಪೂಜೆ ಪ್ರಾರಂಭವಾಯಿತು.ಹೀಗೆ ೩ ತಿಂಗಳು ಕಳೆಯಿತು.

ರಾಯರ ೩ ವರ್ಷದ ಬಾಂಡ್ ಮುಗಿಯುತ್ತ ಬಂತು.ರಾಯರು ಈಗ ಇರುವ ಕಂಪೆನಿ ಬಿಡುವ ತೀರ್ಮಾನ ಕೈಗೊಂಡಿದ್ದರು.ಬೇರೆ ಕಂಪೆನಿಗಳಿಗೆ ಅರ್ಜಿ ಹಾಕಿದರು."ದ ನ್ಯಾಷನಲ್ ಇನ್ಸ್ಟ್ರುಮೆಂಟ್" ಕಂಪೆನಿಯ ಇಂಟರ್ವ್ಯೂಗೆ ಸೆಲೆಕ್ಟ್ ಆದರು."ಚಿಪ್ ಡಿಸೈನ್" ಕ್ಷೇತ್ರದಲ್ಲಿದ್ದ ಅನುಭವ,ಹೊಸ ಹೊಸ ಐಡಿಯಾ ಇವು ಒಂದು ಕ್ಷಣ ಇಂಟರ್ವ್ಯೂ ನಡೆಸುತ್ತಿದ್ದವರನ್ನೇ ದಿಗ್ಭ್ರಮೆಗೊಳಿಸಿತು.ರಾಯರನ್ನು ನೇರವಾಗಿ "ರಿಸರ್ಚ್ ಅಂಡ್ ಡೆವಲಪ್ಮೆಂಟ್" ವಿಭಾಗಕ್ಕೆ ಆರಿಸಿದರು.ಹೊಸ ಕೆಲಸ "ಯು ಎಸ್ ಎ"ಯಲ್ಲಿ.

ರಾಯರ ಅಮ್ಮನಂತೂ ಸಂತಸದಿಂದ ಕುಣಿದು ಕುಪ್ಪಳಿಸಿದರು.ಕೊನೆಗೂ ಮಗನಿಗೆ ದೊಡ್ಡ ಕೆಲಸವಾಯಿತಲ್ಲ.ಅವನ ಸಾಧನೆಗೆ ತಕ್ಕ ಮನ್ನಣೆ ಸಿಕ್ಕಿತಲ್ಲ ಎಂದು ಸಂತಸ ಪಟ್ಟರು.ದೇವರು ಇದ್ದಾನೆ ಎಂಬುದು ಸುಳ್ಳಲ್ಲ,ಇಂದಲ್ಲ ನಾಳೆ ಒಳ್ಳೆಯದಾಗುತ್ತದೆ ನಮ್ಮ ದಿನ ಬರುವವರೆಗೆ ನಾವು ಕಾಯಬೇಕು ಎಂಬ ಸತ್ಯ ಮನಗಂಡರು.ಬ್ರಹ್ಮರಾಯರು ಇಲ್ಲೇ ಭಾರತದಲ್ಲೇ ಎಲ್ಲಿಯಾದರೂ ನೋಡಬಹುದಿತ್ತು ಎಂದು ತಮ್ಮಷ್ಟಕ್ಕೆ ತಾವೇ ಅಂದು ಕೊಂಡರು.

ಸಂದ್ಯಾಲಂತೂ ರಾಯರು ಇಂಟರ್ವ್ಯೂ ಗೆ ಹೋಗುವಾಗಲೇ ಎಲ್ಲ ಭಾರವನ್ನು ದೇವರ ಮೇಲೆ ಹೊರಿಸಿದ್ದರು.ಅವಳ ನಂಬಿಕೆ ಹುಸಿಯಾಗಲಿಲ್ಲ.ಎಲ್ಲೆಡೆಯಿಂದ ಅಭಿನಂದನೆ,ಮೆಚ್ಚುಗೆಯ ಪತ್ರಗಳು,ಫೋನ್ ಕಾಲ್ ಗಳು ಬಂದವು.ರಾಯರ ಕನಸು ನನಸಾಗಿತ್ತು,ಯಾವುದೇ "ಚಿಪ್ ಡಿಸೈನ್ ಇಂಜಿನಿಯರ್"ನ ಮಹೋನ್ನತ ಕನಸು "ರಿಸರ್ಚ್ ಅಂಡ್ ಡೆವಲಪ್ಮೆಂಟ್" ಕ್ಷೇತ್ರ,ನೇರವಾಗಿ ಅಲ್ಲಿಗೆ ಆಯ್ಕೆಯಾದದ್ದು ರಾಯರಿಗೆ ಬಹಳ ಆನಂದ ತಂದಿತ್ತು. ಕಳೆದ ೩ ತಿಂಗಳುಗಳಲ್ಲಿ ಆಫೀಸಿನಲ್ಲಿ ಆದ ಬದಲಾವಣೆ,ಈಗ ಇನ್ನೂ ಒಳ್ಳೆಯ ಹೊಸ ಕೆಲಸ ಸಿಕ್ಕಿದ್ದು,ಮನಸ್ಸಿಗೆ ಸಾಕಷ್ಟು ನೆಮ್ಮದಿ ನೀಡಿತ್ತು.

ರಾಯರು ಮುಂದಿನ ಸುಮಾರು ೫ ವರ್ಷಗಳ ಕಾಲ "ಯು ಎಸ್ ಎ "ಯಲ್ಲಿ ಕೆಲಸ ಮಾಡಿದರು."ರಿಸರ್ಚ್ ಅಂಡ್ ಡೆವಲಪ್ಮೆಂಟ್" ಕ್ಷೇತ್ರದಲ್ಲಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ,ರಾಯರು ತಮ್ಮ ಎಲ್ಲ ಶ್ರಮ,ಏಕಾಗ್ರತೆಯಿಂದ ಕೆಲಸ ಮಾಡಿ,ಎಲ್ಲ ಅಡೆ ತಡೆಗಳನ್ನೂ ದಾಟಿ ಬಂದರು.ಹೊಸತನ್ನು ಕೊಟ್ಟರು,ಹಳೆಯದರಲ್ಲಿರುವ ಲೋಪ ಧೋಷಗಳನ್ನು ಸರಿಪಡಿಸಿದರು.

ಸಂಧ್ಯಾ ರಾಯರ ಬಾಳಲ್ಲಿ ಬೆಳಕಾಗಿ "ಪ್ರೀತಿ" ಬಂದಳು."ಅರ್ಜುನ್"ಗೆ ೬ ತಿಂಗಳು ಆಗಿದ್ದಾಗ ರಾಯರು "ಯು ಎಸ್ ಎ" ಬಿಟ್ಟು ಮತ್ತೆ ಬೆಂಗಳೂರಿಗೆ ಬಂದರು.ರಾಯರು ಬೆಂಗಳೂರಿನಲ್ಲಿ ಚೀಫ್ ಆರ್ಕಿಟೆಕ್ ಆಗಿ ನೇಮಕವಾದರು.

ಇತ್ತ ರಾಯರು ವಿಧ್ಯಾಗಿರಿಯಲ್ಲಿ ತಮ್ಮ ಜಾಗಕ್ಕೆ ಹತ್ತಿರದಲ್ಲಿಯೇ ಇದ್ದ ದೇಜಪ್ಪ ಶೆಟ್ರ ೭ ಎಕರೆ ಜಾಗ ಮಾಡಿಕೊಂಡರು.೨ ಎಕರೆ ಅಡಿಕೆ,ತೆಂಗಿನ ತೋಟವಿತ್ತು.ಇನ್ನು ೨ ಎಕರೆ ಗದ್ದೆ ಉಳಿದ ೩ ಎಕರೆ ಬೋಳು ಗುಡ್ಡ.ರಾಯರಿಗೆ ಬಾಲ್ಯದಲ್ಲಿಯೇ ಕೃಷಿಯ ಮೇಲೆ ಪ್ರೀತಿ ಇತ್ತು.ಅವರ ಕೃಷಿ ಪ್ರೀತಿಗೆ ಮತ್ತಷ್ಟು ಪುಷ್ಟಿ ದೊರೆತಿದ್ದು ಅವರು ಪ್ರೌಢಶಾಲೆಗೆ ಬಂದ ಮೇಲೆ,ಅವರ ಮುಖ್ಯೋಪಾಧ್ಯಾಯರಾದ "ಅಚ್ಯುತ ಭಟ್ಟರು" ಶಾಲೆಯ ಆವರಣದಲ್ಲಿದ್ದ ಖಾಲಿ ಜಾಗದಲ್ಲಿ ಹೂದೋಟ,ಶಾಲೆಯ ಹಿಂಭಾಗದಲ್ಲಿದ್ದ ಜಾಗದಲ್ಲಿ ಅಡಿಕೆ ಮರ,ತೆಂಗು ನೆಟ್ಟು ಬೆಳೆಸಿದ್ದರು.ಅದನ್ನು ಪೋಷಿಸಿದ್ದರು.ಅವರ ಕಾಳಜಿಯಿಂದಾಗಿಯೇ ಅಡಿಕೆ,ತೆಂಗಿನ ಸಸಿ,ಮರವಾಯಿತು.ಫಲ ಕೊಡಲು ಪ್ರಾರಂಭಿಸಿತು.ತಾವು ಅಲ್ಲಿರುವಷ್ಟು ದಿನವು ದಿನ ಬೆಳಗ್ಗೆಯೇ ಬಂದು ಡ್ರಿಪ್ ನೀರೆಲ್ಲ ಬಿಟ್ಟು ಎಲ್ಲ ಕಡೆ ಒಂದು ರೌಂಡ್ ಹೊಡೆದು ಹೋಗುತ್ತಿದ್ದರು.ಆಮೇಲೆ ಹಗಲು ಪಾಠ,ಶಾಲೆಯ ಕೆಲಸಗಳು ಇರುತ್ತಿದ್ದವು.ಎಲ್ಲ ಮುಗಿಸಿ ಸಂಜೆ ಇನ್ನೊಮ್ಮೆ ಹೋಗಿ ಸುತ್ತಾಡಿ ನೀರು ಎಲ್ಲ ಹಾಕಿ ಕಾಲ ಕಾಲಕ್ಕೆ ಅದಕ್ಕೆ ಬೇಕಾದ ಸೊಪ್ಪು,ಗೊಬ್ಬರ ಎಲ್ಲ ಸಿಗುವಂತೆ ವ್ಯವಸ್ತೆ ಮಾಡಿದ್ದರು.ತುಂಬಾ ಸರಳ ಸ್ವಭಾವದವರಾಗಿದ್ದ ಅವರು ಮುಖ್ಯೋಪಾಧ್ಯಾಯರಾಗಿದ್ದ ಅವಧಿಯಲ್ಲಿ ಶಾಲೆ ಎಲ್ಲ ವಿಧದಲ್ಲಿಯೂ,ಎಲ್ಲ ವಿಭಾಗದಲ್ಲಿಯೂ ಸಾಕಷ್ಟು ಅಭಿವೃದ್ದಿ ಹೊಂದಿತು.ಕೃಷಿ ಕ್ಷೇತ್ರದಲ್ಲಿ ಅವರಿಗಿದ್ದ ಪ್ರೀತಿ,ಅವರ ಕಾರ್ಯ ವಿಧಾನ ರಾಯರ ಮೇಲೆ ಬಹಳ ಪ್ರಭಾವ ಬೀರಿದ್ದವು.ಆದರೆ ಈಗ ಇರುವ ಜಾಗ ಅಸ್ತಿಯಲ್ಲಿ ಬಹಳ ಅಭಿವೃದ್ದಿ ಮಾಡುವುದು ಅಸಾಧ್ಯ ಎಂದು ರಾಯರು ಅಂದು ನಿರ್ಧರಿಸಿದ್ದರು.ಎಲ್ಲದರ ಫಲವೇ ಈಗಿನ ೭ ಎಕರೆ ಜಮೀನು ಖರೀದಿ.

ರಾಯರು "ಎಂ ಎಸ್ ಸಿ" ಓದುತ್ತಿದ್ದಾಗ ಇನ್ನೊಬ್ಬರು ರಾಯರ ಮೇಲೆ ಬಹಳ ಪ್ರಭಾವ ಬೀರಿದವರು ಅವರ ಅಣ್ಣ ಶ್ಯಾಮ ಭಟ್.ಶ್ಯಾಮ ಭಟ್ ಸರಕಾರಿ ಹುದ್ದೆಯಲ್ಲಿದ್ದರು.ಆದರೆ ೪೦ನೆಯ ವಯಸ್ಸಿನಲ್ಲಿಯೇ ಸ್ವಯಂ ನಿವೃತ್ತಿ ತೆಗೆದುಕೊಂಡು ಮನೆಯಲ್ಲಿ ಇರುವ ಸಣ್ಣ ಜಮೀನಿನಲ್ಲಿ ಕೃಷಿ ಮಾಡಿದ್ದರು.ತಾವು ಕೆಲಸ ಮಾಡುತ್ತಿದ್ದ ಕ್ಷೇತ್ರದಲ್ಲಿದ್ದ ಭ್ರಷ್ಟಾಚಾರ,ಲಂಚ,ಮೋಸ,ವಂಚನೆ,ಎಲ್ಲೂ ಸಿಗದ ಪ್ರೋತ್ಸಾಹ ಇವೆಲ್ಲವೂ ಅವರು ರಾಜೀನಾಮೆ ಕೊಡುವಂತೆ ಮಾಡಿತ್ತೋ ಅಥವಾ ಅಲ್ಲಿರುವವರೇ ಮೋಸ ಮಾಡಿ ಇವರು ನಿವ್ರತ್ತಿ ತೆಗೆದುಕೊಳ್ಳುವ ಹಾಗೆ ಮಾಡಿದರೋ ಎಂಬುದು ಇನ್ನು ನಿಘೂಡ.ಅಲ್ಲಿಯವರೆಗೂ ಅವರು ಮನೆಯ ಎಲ್ಲ ಜವಾಬ್ದಾರಿ ವಹಿಸಿಕೊಂಡು ಬಂದಿದ್ದರು.ತಮ್ಮಂದಿರ ವಿಧ್ಯಾಭ್ಯಾಸ,ಮನೆ,ಇರುವ ಸಣ್ಣ ತೋಟದ ದುಡ್ಡು ಎಲ್ಲಿಗೂ ಸಾಲುತ್ತಿರಲಿಲ್ಲ.ಆದರೆ ಶ್ಯಾಮಣ್ಣ ತಮ್ಮ ಎಲ್ಲ ದುಡ್ಡನ್ನು ಮನೆಗೆ,ಕುಟುಂಬದ ಅಭಿವೃದ್ದಿಗೆ ವಿನಿಯೋಗಿಸಿದ್ದರು.ತಮಗಾಗಿ ಏನನ್ನು ಇಟ್ಟಿರಲಿಲ್ಲ.ತನ್ನದು ಎಂದು ಶ್ಯಾಮಣ್ಣನ ಬಳಿಯಿದ್ದುದು ಹಳೆಯ ಜೀಪ್ ಮಾತ್ರ.ತನ್ನ ತಮ್ಮಂದಿರು,ಕುಟುಂಬ ಎಲ್ಲರ ಸಂತೋಷವೇ ತಮ್ಮ ಸಂತೋಷ ಎಂದು ನಂಬಿದ್ದರು ಮತ್ತು ಹಾಗೆಯೆ ಬಾಳಿದರು.ಇದ್ದ ಒಬ್ಬನೇ ಮಗನನ್ನು ವೇದಪಾಠಕ್ಕೆ ಕಳಿಸಿದ್ದರು.

ಮನೆಯಲ್ಲಿ ನಿಂತ ಮೇಲೆ ಶ್ಯಾಮಣ್ಣ ಸುಮ್ಮನೆ ಕೂರಲಿಲ್ಲ.ಪಕ್ಕ ಕೃಷಿಕರಾಗಿ ಹೋದರು.ಎಲ್ಲ ಕೆಲಸವನ್ನು ಕಲಿತರು.ಅಂದು ಸಂಜೆ ರಾಯರು ಶ್ಯಾಮಣ್ಣನ ಮನೆಗೆ ಹೋಗಿದ್ದರು.ಶ್ಯಾಮಣ್ಣ ಕೆಲಸದವರ ಜೊತೆಗೆ ಸೇರಿ ತಾವು ಕೆಲಸ ಮಾಡುತ್ತಿದ್ದರು.ಚಾ ಕುಡಿಯಲು ಎಂದು ಶ್ಯಾಮಣ್ಣ ಬಂದಾಗಲೇ ರಾಯರು ಅವರನ್ನು ನೋಡಿದ್ದು,ಮೊದಲ ಸಲ ಹಾರೆ,ಗುದ್ದಲಿ ಹಿಡಿದಿದ್ದರು.ಇಲ್ಲಿಯವರೆಗೂ ಕೆಲಸ ಮಾಡಿಸಿ ಅಷ್ಟೇ ಗೊತ್ತಿದ್ದ ಶ್ಯಾಮಣ್ಣ ಇಂದು ತಾವೇ ಕೆಲಸಕ್ಕೆ ಇಳಿದಿದ್ದರು.ಕೈಯಲ್ಲೆಲ್ಲ ಬೊಬ್ಬೆ ಎದ್ದಿದ್ದವು.ಬಿಸಿ ಬಿಸಿ ಚಾ ಗ್ಲಾಸ್ ಹಿಡಿಯಲು ಆಗುತ್ತಿರಲಿಲ್ಲ.ಅವರು ಕಷ್ಟಪಟ್ಟು ಕುಡಿಯುತ್ತಿದ್ದರು.ಇವೆಲ್ಲ ನೋಡಿ ರಾಯರಿಗೆ ಕರುಳು ಚುರ್ ಎಂದಿತು.ಅತ್ತಿಗೆಯ ಮುಖ ನೋಡಿದಾಗಲಂತೂ ದುಖ: ಉಮ್ಮಳಿಸಿ ಬಂತು.ಆದರೆ ಶ್ಯಾಮಣ್ಣ ಮಾತ್ರ ಎಂದಿನಂತೆ ಏನೂ ನಡೆದಿಲ್ಲ ಎಂಬಂತಿದ್ದರು.ಅಲ್ಲಿಂದ ಮುಂದೆ ೨,೩ ತಿಂಗಳಲ್ಲಿ ಶ್ಯಾಮಣ್ಣ ಅವರು ಕೃಷಿ ಕಾರ್ಯದಲ್ಲಿ ಎಷ್ಟು ಪಳಗಿದ್ದರು ಎಂದರೆ ಅವರು ಅಷ್ಟು ಸಮಯ ಉದ್ಯೋಗದಲ್ಲಿದ್ದರು ಎಂದರೆ ಯಾರು ನಂಬದ ಸ್ತಿತಿ ಬಂತು.ಶ್ಯಾಮಣ್ಣ ಬಾಲ್ಯದಲ್ಲಿ ತೋಟದ ಕೆಲಸ ಎಲ್ಲ ಮಾಡುತ್ತಿದ್ದರು,ಆಮೇಲೆ ಉದ್ಯೋಗವಾದ ಮೇಲೆ ಮಾಡಿಸುತ್ತಿದ್ದರು,ಈಗ ಮತ್ತೆ ಮೊದಲಿನಂತೆ ಮಾಡುತ್ತಿದ್ದಾರೆ.ನಿಜವಾಗಿಯೂ "ಗ್ರೇಟ್ ",ಮುಂದೆ ಒಂದೆರಡು ವರ್ಷಗಳಲ್ಲಿ ಫಸಲು ಎಲ್ಲ ಹೆಚ್ಚಾದವು,ಸೋರಿಕೆ ಕಳ್ಳತನ ನಿಂತಿತು.ಅಲ್ಲಲ್ಲಿ ಇಂಗು ಗುಂಡಿಗಳು ತಲೆ ಎತ್ತಿದವು.ಶ್ಯಾಮಣ್ಣ ಮಾಡಿದ ಒಂದೊಂದು ಕೆಲಸದಿಂದಲೂ ನೆರೆ ಹೊರೆಯವರಿಗೆ ತುಂಬಾ ಉಪಕಾರವಾಗುತ್ತಿತ್ತು.ಅವರು ಹಿಂದೆ ಉದ್ಯೋಗದಲ್ಲಿದ್ದಾಗ ತೆಗೆದ ಜೀಪ್ ಅಲ್ಲಿ ಸುತ್ತ ಮುತ್ತ ನಡೆದ ಎಷ್ಟೋ ಮದುವೆಗಳಿಗೆ,ಶುಭ ಕಾರ್ಯಗಳಿಗೆ ಸಾಕ್ಷಿಯಾಗಿತ್ತು,ತಮ್ಮ ಕೈಯಲ್ಲಿ ದುಡ್ಡು ಇರುವವರೆಗೂ ಅದನ್ನು ಪರರ ಉಪಯೋಗಕ್ಕಾಗಿಯೇ ವಿನಿಯೋಗಿಸಿದರು.ಅದಕ್ಕೆ ಸುತ್ತಮುತ್ತ ಎಲ್ಲ ಶ್ಯಾಮಣ್ಣ ಎಂದರೆ ಇಂದಿಗೂ ಆ ಗೌರವ ಭಾವನೆ,ಪ್ರೀತಿ ಅದರ.

ಆದರೆ ಶ್ಯಾಮಣ್ಣನ ಕಷ್ಟದ ದಿನಗಳಲ್ಲಿ ಅವರ ಮನಕ್ಕೆ ಎಷ್ಟು ಜನ ಸಾಂತ್ವನ ಹೇಳಿದರು,ಎಷ್ಟು ಜನ ಬೆಂಬಲಕ್ಕೆ ನಿಂತರು ಎಂದು ಯೋಚಿಸುತ್ತ ಹೋದಂತೆ ರಾಯರಿಗೆ ಕಾಣಿಸಿದ್ದು ಬರಿ ಕತ್ತಲು,ಎಂದು ಎಲ್ಲರಿಗೆ ಕೈಯೆತ್ತಿ ಕೊಡುತ್ತಿದ್ದ ಕೈಯದು ಎಂದೂ ಕೈ ಚಾಚಲಿಲ್ಲ,ಸ್ವಾಭಿಮಾನವೇ ಉಸಿರು ಆ ಜೀವಕ್ಕೆ.ನಡೆದ ಪ್ರತಿಯೊಂದು ಘಟನೆಗಳು ರಾಯರಿಗೆ ನಮ್ಮ ನಡುವಿನ ಬಂಧ ಗಟ್ಟಿ ಸಾಲದು,ನಮ್ಮದು ಬರಿ ತೋರಿಕೆಯ ಪ್ರೀತಿ,ಎಲ್ಲವು ನಾಟಕ ಎಂದು ಭಾಸವಾಗುತ್ತ್ತಿತ್ತು.ಸುಮ್ಮನೆ ಮದುವೆ,ಉಪನಯನ,ಪೂಜೆ ಮುಂತಾದ ಸಮಾರಂಭಗಳಿಗೆ ಮಾತ್ರ ನಾವು ಒಟ್ಟು ಸೇರುತ್ತೇವೆ,ಜೋರಾಗಿ ನಗುತ್ತೇವೆ,ಸಂಭ್ರಮಿಸುತ್ತೇವೆ,ಮತ್ತೆ ನಮ್ಮ ನಮ್ಮ ದಾರಿ ನಮಗೆ.ಪರಸ್ಪರರ ಕಷ್ಟ ಸುಖಗಳಿಗೆ ನಮ್ಮ ಸ್ಪಂದನ ಏನೇನೂ ಸಾಲದು.ಸೋತಾಗ ಎತ್ತಿ ಹಿಡಿದು ಬೆಂಬಲಕ್ಕೆ ನಿಂತು ಮುನ್ನಡೆಸುವುದರಲ್ಲಿ ನಮ್ಮ ಕುಟುಂಬ ಭಾರಿ ಹಿಂದೆ ಉಳಿದಿದೆ,ಹೀಗೆ ವಿಮರ್ಶೆ ಮಾಡುತ್ತ ಹೋದಂತೆ ರಾಯರಿಗೆ ಕರಾಳ ಸತ್ಯ ಗೋಚರವಾಗತೊಡಗಿತು.ನಮ್ಮ ಅಣ್ಣ ತಮ್ಮಂದಿರಿಗೆ,ಅಪ್ಪಚ್ಚಿ ದೊಡ್ಡಪ್ಪನವರಿಗೆ ಸಹಾಯ ಮಾಡುವಾಗ ನಾವು ಹಿಂದೆ ಮುಂದೆ ನೋಡುತ್ತೇವೆ,ಇನ್ನು ನಾವು ಹೊರಗಿನವರಿಗೆ ಸಹಾಯ ಮಾಡಿದ ಹಾಗೆ.ಈ ಉನ್ನತ ರಾಷ್ಟ್ರ,ಸಹೋದರತ್ವ ಎಲ್ಲ ಬರಿ ಪುಸ್ತಕಗಳಿಗೆ ಮೀಸಲಾಯಿತು ಹೀಗೆ ಯೋಚನೆ ಮಾಡಿದಷ್ಟು ಹೊಸ ಹೊಸ ಅರ್ಥ ಕೊಡುತ್ತಿತ್ತು.

ಆದರೆ ಇವೆಲ್ಲವೂ ಕನಸಾಗಿಯೇ ಇರಬೇಕೆಂದೇನೂ ಇಲ್ಲ ಎಂದು ರಾಯರಿಗೆ ಉತ್ಸಾಹ,ಪ್ರೋತ್ಸಾಹ ನೀಡಿದವರು ಅವರ ಮಿತ್ರರಾದ ಪ್ರಸನ್ನರ ಮಾತುಗಳು.ಅಂದು ಪ್ರಸಾದ,ಸತೀಶರು ಹೇಳಿದ್ದ ಮಾತು ರಾಯರಲ್ಲಿ ಹೊಸ ಉತ್ಸಾಹ ತುಂಬಿತು.ಪ್ರಸನ್ನರು ನೀಡಿದ ತುಂಬು ಕುಟುಂಬದ ಕಲ್ಪನೆ ಅಂತೂ ಮರೆಯಲೇ ಅಸಾಧ್ಯ.ಪ್ರಸನ್ನರು ಹೇಳಿದ ಹಾಗೆ ಅವರ ಮಿತ್ರರೊಬ್ಬರು ತಮ್ಮ ದೊಡ್ಡಪ್ಪನ ಮಗ ಅಣ್ಣನ ಮನೆಯಲ್ಲಿ ನಿಂತು ಕೆಲಸಕ್ಕೆ ಹೋಗುತ್ತಿದ್ದರು.ಅಣ್ಣನ ಬೈಕ್,ಕಾರ್ ಓಡಿಸುತ್ತಿದ್ದರು.ಅಲ್ಲಿ ಪರಸ್ಪರರ ನಡುವೆ ಪ್ರೀತಿ,ವಿಶ್ವಾಸ ಇತ್ತು.ಇನ್ನು ಸತೀಶರದಾದರೋ ೪೨ ಜನರ ತುಂಬು ಕುಟುಂಬ,ಎಲ್ಲರು ಬೇರೆ,ಬೇರೆ ಇದ್ದಾರೆ.ಯಾರಿಗೂ ಪಾಲು ಆಗಲಿಲ್ಲ.ಎಲ್ಲ ಕಾರ್ಯಕ್ರಮಗಳಲ್ಲಿ ಜೊತೆ ಸೇರುತ್ತಾರೆ,ಒಟ್ಟಾಗಿ ಆಚರಿಸುತ್ತಾರೆ,ಎಲ್ಲಕ್ಕಿಂತ ಹೆಚ್ಚಾಗಿ ಪರಸ್ಪರಿಗೆ ಸಹಾಯ ಮಾಡುತ್ತಾರೆ.ಏನೇ ಹೊಸತು ಗೊತ್ತಾದರೂ ತಿಳಿಸುತ್ತಾರೆ.ಮೈಸೂರಲ್ಲಿ ಯಾರೋ ಒಬ್ಬರು ಸುಮಾರು ೧೦ ಎಕರೆ ಜಾಗ ಮಾರುತ್ತಿದ್ದರು ಬಹಳ ಕಡಿಮೆ ದರಕ್ಕೆ,ಯಾರೋ ಒಬ್ಬರಿಗೆ ಗೊತ್ತಾಯಿತು,ಕೂಡಲೇ ಎಲ್ಲರಿಗು ಗೊತ್ತಾಯಿತು,ಮುಂದೆ ಒಳ್ಳೆ ರೇಟು ಬರುವ ಸಾಧ್ಯತೆ ಇದೆ,ಎಲ್ಲರು ಮಾತಾಡಿಕೊಂಡರು.ಆ ೧೦ ಎಕರೆ ಅವರೇ ಒಂದು ಕುಟುಂಬದವರು ಬೇರೆ ಬೇರೆಯಾಗಿ ಮಾಡಿಕೊಂಡರು.

ಇಂತಹ ಸಂಭಂದಗಳು ನಮ್ಮಲ್ಲಿವೆಯೇ?ಹೀಗೆ ನಾವು ಎಷ್ಟು ಪರಸ್ಪರ ಅರಿತುಕೊಂಡಿದ್ದೇವೆ,ಪರಸ್ಪರರ ಸಹಾಯ ಮಾಡಿದ್ದೇವೆ? ಇದು ಹೀಗೆ ಮುಂದುವರೆಯಲು ನಾನು ಬಿಡುವುದಿಲ್ಲ. ನಮ್ಮದು ಎಂದಿಗೂ ತುಂಬು ಕುಟುಂಬ ಪ್ರೀತಿ,ಪ್ರೇಮ ನಂಬುಕೆಯೇ ಜೀವಾಳ.ಅದನ್ನು ನಾನು ಸಾಧಿಸುತ್ತೇನೆ ಎಂದು ರಾಯರು ಅಂದೇ ಯೋಚಿಸಿದ್ದರು.ಯಾವುದನ್ನೇ ಸಾಧಿಸಬೇಕಾದರು ಮೊದಲು ಅರ್ಥಿಕ ಸ್ವಾವಲಂಬನೆ ಅಗತ್ಯ,ಅದು ಇಂದು ಸಾಧ್ಯವಾಗಿದೆ,ಇನ್ನೊಂದು ಅದನ್ನ ಮಾಡಲೇಬೇಕೆನ್ನುವ ಇಚ್ಛಾಶಕ್ತಿ ೨ ಸೇರಿದೆ.ಮೊದಲು ನಾವೆಲ್ಲ ಒಂದಾದರೆ ಮುಂದೆ ಮನದಲ್ಲಿ ಹಮ್ಮಿಕೊಂಡ ಎಷ್ಟೋ ಯೋಜನೆಗಳಿವೆ.ರಾಯರು ಏನೋ ಮಾಡ ಹೊರಟಿದ್ದಾರೆ ಜಾಗ ಖರೀದಿ ಆಗಿದೆ.ಇನ್ನೇನು ಕೆಲಸ ಶುರುವಾಗಲಿದೆ.


ಮುಂದುವರೆಯುವುದು.......